ಪ್ರೀತಿ, ಮದುವೆ, ಕಾನೂನು: ಒಂದು ವಿಶೇಷ ಕಾಯ್ದೆ

ವಿಶೇಷ ವಿವಾಹ ಕಾಯ್ದೆ, 1954, ಅಂತರ್-ಧಾರ್ಮಿಕ, ಅಂತರ್ಜಾತಿ ವಿವಾಹಗಳನ್ನು ಸ್ಪಷ್ಟವಾಗಿ ಎತ್ತಿಹಿಡಿದಿದೆ

Translated by Madhusudhan Rao

ವಿಶೇಷ ಮದುವೆ ಕಾಯಿದೆ (ಸ್ಪೆಷಲ್ ಮ್ಯಾರೇಜ್ ಆಕ್ಟ್) 1872 ರ ಬದಲಾಗಿ ಜಾರಿಗೆ ಬಂದ ವಿಶೇಷ ಮದುವೆ ಕಾಯಿದೆ (ಸ್ಪೆಷಲ್ ಮ್ಯಾರೇಜ್ ಆಕ್ಟ್) 1954 ಒಂದು ಪೌರ ಕಾಯ್ದೆಆಗಿದ್ದು, ಇದರಲ್ಲಿ ಜಾತಿ, ಧರ್ಮಗಳನ್ನು ಲೆಕ್ಕಿಸದೆ ವ್ಯಕ್ತಿಗಳ ನಡುವೆ ಮದುವೆಗೆ ಆಸ್ಪದ ಇರುತ್ತದೆ.  ಈ ಕಾಯ್ದೆ ವ್ಯಕ್ತಿಗಳು ತಮ್ಮ ವಿವಾಹವನ್ನು ಯಾವುದೇ ವಿಧಾನದಲ್ಲಿ ಆಚರಿಸಲು ಅನುಮತಿಸುತ್ತದೆ ಮತ್ತು ಈಗಾಗಲೇ ಇತರ ಪ್ರಕಾರದ ವಿವಾಹದಡಿಯಲ್ಲಿ ಮದುವೆಯಾದ ವ್ಯಕ್ತಿಗಳಿಗೆ ತಮ್ಮ ವಿವಾಹವನ್ನು ಕಾಯಿದೆಯಡಿ ನೋಂದಾಯಿಸಲು ಅನುಮತಿ ನೀಡುತ್ತದೆ.

ಜನರು ತಮ್ಮ ಸಂಗಾತಿಯನ್ನು ಆಯ್ಕೆ ಮಾಡುವ ವಿಷಯದಲ್ಲಿ ಧರ್ಮ ಮತ್ತು ಜಾತಿ ಅಡ್ಡ ಬರದಂತೆ ನೋಡಿಕೊಳ್ಳಲು ಈ ಕಾನೂನು ಜಾರಿಗೆ ತರಲಾಯಿತು. ವಾಸ್ತವವಾಗಿ, ಈ ಕಾಯಿದೆಯಡಿ ವಿವಾಹ ಸಮಂಜಸ ಎನಿಸಿಕೊಳಲು ಮುಖ್ಯವಾಗಿ ಅಗತ್ಯವಿರುವುದೆಂದರೆ, ಸಂಬಂಧಪಟ್ಟ ಎರಡೂ ವ್ಯಕ್ತಿಗಳು ತಮ್ಮ ಧಾರ್ಮಿಕ ನಂಬಿಕೆಗಳು ಅಥವಾ ಜಾತಿಯನ್ನು ಲೆಕ್ಕಿಸದೆ ಮದುವೆಗೆ ಒಪ್ಪಿಗೆ ನೀಡುವುದು.

ಈ ಕಾಯಿದೆಯಡಿ, ವಿವಾಹ ಮಾನ್ಯ ಎನಿಸಿಕೊಳ್ಳಲು ಮೂಲಭೂತ ಅವಶ್ಯಕತೆಗಳು ಇತರ ವೈಯಕ್ತಿಕ ಕಾನೂನುಗಳ ಅಡಿಯಲ್ಲಿ ನಡೆಯುವ ಮದುವೆಗಳಿಗೆ ಹೋಲುತ್ತವೆ. 30 ದಿನಗಳವರೆಗೆ ಸಾರ್ವಜನಿಕ ಪರಿಶೀಲನೆಗೆ ವಿವಾಹದ ಸೂಚನೆ ಲಭ್ಯವಿರಬೇಕೆಂದು ಕಾಯಿದೆ ಆದೇಶಿಸಿದೆ. ಆದ್ದರಿಂದ, ನೋಟಿಸ್ ಅನ್ನು ಮದುವೆ ರಿಜಿಸ್ಟ್ರಾರ್ ಕಚೇರಿಯ ನೋಟಿಸ್ ಬೋರ್ಡ್‌ನಂತಹ “ಯಾವುದಾದರೂ ನಿರ್ದಿಷ್ಟ ಸ್ಥಳದಲ್ಲಿ” ಸಾಮಾನ್ಯವಾಗಿ ಪ್ರದರ್ಶಿಸಲಾಗುತ್ತದೆ.

ಪ್ರದರ್ಶನ / ಗೌಪ್ಯತೆ

ದೆಹಲಿ, ರಾಜಸ್ಥಾನ ಮತ್ತು ಹರಿಯಾಣ ಸೇರಿದಂತೆ ಕೆಲವು ರಾಜ್ಯಗಳಲ್ಲಿ, ಮದುವೆಯಾಗಲು ಉದ್ದೇಶಿಸಿರುವ ದಂಪತಿಗಳ ವಸತಿ ವಿಳಾಸಗಳಿಗೆ ನೋಟಿಸ್ ಕಳುಹಿಸುವುದು ವಾಡಿಕೆಯಾಗಿದೆ.

ಇದು  ಪುರುಷಪ್ರಧಾನ ಮತ್ತು ಜಾತಿ ಆಧಾರಿತ ಅಧಿಕಾರಶಾಹಿ ಆಚರಣೆಯಲ್ಲದೆ ಬೇರೇನಲ್ಲ. ಪ್ರಾಸಂಗಿಕವಾಗಿ ಈ ಅವಶ್ಯಕತೆಗಳನ್ನು ದೆಹಲಿ ಮತ್ತು ರಾಜಸ್ಥಾನ ಹೈಕೋರ್ಟ್‌ಗಳು “ಕಾನೂನಿನಿಂದ ಸಮರ್ಥಿಸಲಾಗದ ಅಥವಾ ಅಧಿಕೃತಗೊಳಿಸಲಾಗದ” ಮತ್ತು ಅವು “ವ್ಯಕ್ತಿಗಳ ಗೌಪ್ಯತೆಗೆ ಉಲ್ಲಂಘನೆಯಾಗಿವೆ” ಎಂದು ಹೇಳಿ ತಳ್ಳಿಹಾಕಿವೆ. ಈ ಔಪಚಾರಿಕತೆಯನ್ನು ಬಲಪಂಥೀಯ ಸಂಸ್ಥೆಗಳು ಹೇಗೆ ಹಸ್ತಕ್ಷೇಪ ಮಾಡಲು ಮತ್ತು ಅಂತರ್ಮತ ದಂಪತಿಗಳಿಗೆ ಕಿರುಕುಳ ನೀಡಲು ಬಳಸಿಕೊಂಡಿವೆ ಎಂಬುದನ್ನು ತೋರಿಸುವ ಹಲವಾರು ವರದಿಗಳಿವೆ.

ವಿಶೇಷ ಮದುವೆ ಕಾಯ್ದೆಯು ಪರಸ್ಪರ ಒಪ್ಪಿಕೊಂಡ ವಯಸ್ಕರ ಆಯ್ಕೆಯಲ್ಲಿ ಕುಟುಂಬದಿಂದ ಅಥವಾ ಇತರರಿಂದ ಯಾವುದೇ ಹಸ್ತಕ್ಷೇಪಕ್ಕೆ ಆಸ್ಪದ ಕೊಡುವುದಿಲ್ಲ. 30 ದಿನಗಳ ಸಾರ್ವಜನಿಕ ನೋಟಿಸ್ ಕಡ್ಡಾಯಗೊಳಿಸುವ ನಿಬಂಧನೆಯನ್ನೂ ಸಹ, ವ್ಯಕ್ತಿಗಳ ಗೌಪ್ಯತೆ ಹಕ್ಕನ್ನು ಉಲ್ಲಂಘಿಸುತ್ತದೆ ಎಂಬ ಕಾರಣಕ್ಕೆ  ಸುಪ್ರೀಂ ಕೋರ್ಟ್ ಸಮ್ಮುಖದಲ್ಲಿ ಪ್ರಶ್ನಿಸಲಾಗಿದೆ.

ಅತ್ಯಂತ ವೈಯಕ್ತಿಕ, ನಿಕಟ ನಿರ್ಧಾರ

ಇಲ್ಲಿ ನಾವು ನೆನಪಿಡಬೇಕಾದ್ದು ಏನಂದರೆ ಸಂಬಂಧ ಮತ್ತು ವಿವಾಹಗಳ ಪರಿಕಲ್ಪನೆಗಳು ಕಾನೂನಿನ ದೃಷ್ಟಿಕೋನದಿಂದ ಗಮನಾರ್ಹ ಬದಲಾವಣೆಗೆ ಒಳಗಾಗಿವೆ. ವಿಚ್ಛೇದನದ ಹಕ್ಕಿನಂತೆಯೇ, ಒಮ್ಮೆ ಕುಟುಂಬಗಳ ನಡುವಿನ ಒಪ್ಪಂದವಾಗಿರುತ್ತಿದ್ದ ವಿವಾಹವು ಈಗ ವ್ಯಕ್ತಿಗಳು ಸಂಗಾತಿ  ಆರಿಸಿಕೊಳ್ಳುವ ಸ್ವಾತಂತ್ರವಾಗಿ ಮಾರ್ಪಟ್ಟಿದೆ. ಪ್ರತಿಯೊಬ್ಬ ವ್ಯಕ್ತಿಯು ತನ್ನ ಸಂಗಾತಿಯನ್ನು ಆಯ್ಕೆ ಮಾಡಲು ಮತ್ತು ತನ್ನ ಆಯ್ಕೆಯ ವ್ಯಕ್ತಿಯನ್ನು ಮದುವೆಯಾಗಲು ಹಕ್ಕು ಮತ್ತು ಸ್ವಾಯತ್ತತೆಯನ್ನು ಹೊಂದಿದ್ದಾರೆ ಎಂದು ಸುಪ್ರೀಂ ಕೋರ್ಟ್ ಮತ್ತೆ ಮತ್ತೆ ಪ್ರತಿಪಾದಿಸಿದೆ.

ಸುಪ್ರೀಂ ಕೋರ್ಟ್, ನವತೇಜ್ ಸಿಂಗ್ ಜೋಹರ್ ಮತ್ತು ಇತರರು ವರ್ಸಸ್ ಯೂನಿಯನ್ ಆಫ್ ಇಂಡಿಯಾ (ಯುಒಐ) ಮತ್ತು ಇತರರು, ಈ ಪ್ರಕರಣದಲ್ಲಿ ಸಲಿಂಗ ಸಂಬಂಧಗಳ ನಿರಪರಾಧೀಕರಣವನ್ನು ಎತ್ತಿಹಿಡಿಯುತ್ತ “ಸಂವಿಧಾನದ 21 ನೇ ಪರಿಚ್ಛೇದದ ಅಡಿಯಲ್ಲಿ ಒಬ್ಬ ವ್ಯಕ್ತಿಗೆ ಒಕ್ಕೂಟದ ಹಕ್ಕೂ ಇದೆ ಎಂಬುದರಲ್ಲಿ ಸಂದೇಹವಿಲ್ಲ.ವಿವಾಹವು ಒಕ್ಕೂಟವಾಗಿದ್ದರೂ, ನಾವು ಒಕ್ಕೂಟ ಎಂದು ಹೇಳಿದಾಗ, ವಿವಾಹದ ಒಕ್ಕೂಟದ ಬಗ್ಗೆ ಹೇಳುತ್ತಿದ್ದೇವೆ ಎಂದು ಅರ್ಥವಲ್ಲ. ಒಂದು ಪರಿಕಲ್ಪನೆಯಂತೆ, ಒಕ್ಕೂಟ ಎಂದರೆ ಒಡನಾಟ ಎಂದರ್ಥ, ಅದು ದೈಹಿಕ, ಮಾನಸಿಕ, ಲೈಂಗಿಕ ಅಥವಾ ಭಾವನಾತ್ಮಕವಾಗಿರಬಹುದು”.

ನ್ಯಾಯಾಲಯವು ವ್ಯಕ್ತಿಯ ಗೌಪ್ಯತೆಯ ಹಕ್ಕನ್ನು ಒತ್ತಿಹೇಳುತ್ತದೆ: “ಸ್ವಾಯತ್ತತೆಯ (autonomy)  ತತ್ವದಡಿ, ವ್ಯಕ್ತಿಯು ಅವನ / ಅವಳ ದೇಹದ ಮೇಲೆ ಸ್ವಾಮಿತ್ವವನ್ನು ಹೊಂದಿರುತ್ತಾನೆ. ಅವನು / ಅವಳು ತನ್ನ ಸ್ವಾಯತ್ತತೆಯನ್ನು ಉದ್ದೇಶಪೂರ್ವಕವಾಗಿ ಇನ್ನೊಬ್ಬ ವ್ಯಕ್ತಿಗೆ ಒಪ್ಪಿಸಬಹುದು ಮತ್ತು ಗೌಪ್ಯತೆಯಲ್ಲಿ ಅವರ ಅನ್ಯೋನ್ಯತೆಯು ಅವರ ಆಯ್ಕೆಯ ವಿಷಯವಾಗಿದೆ.

ಅದೇ ತೀರ್ಪಿನಲ್ಲಿ, ಸಮಕಾಲೀನ ಜಗತ್ತಿನಲ್ಲಿ “ಮದುವೆಯನ್ನು ಸಹ ಈಗ ಮಕ್ಕಳ ಸಂತಾನೋತ್ಪತ್ತಿಗೆ ಸಮನಾಗಿಸುತ್ತಿಲ್ಲ” ಎಂದು ಸುಪ್ರೀಂ ಕೋರ್ಟ್ ಗುರುತಿಸಿದೆ ಮತ್ತು “ಗೌಪ್ಯತೆಯ ರಕ್ಷಣಾಕವಚವು ಮಾನವ ಜೀವನ ಚಕ್ರದ ಮೇಲೆ ಮೂಲಭೂತವಾಗಿ ಪರಿಣಾಮ ಬೀರುವ ಕೆಲವು ನಿರ್ಧಾರಗಳನ್ನು ರಕ್ಷಿಸುತ್ತೆ. ಇದು ವ್ಯಕ್ತಿಗಳ ಜೀವನ ಮತ್ತು ಅಭಿವೃದ್ಧಿಯ ಮೇಲೆ ಪರಿಣಾಮ ಬೀರುವ ಅತ್ಯಂತ ವೈಯಕ್ತಿಕ ಮತ್ತು ನಿಕಟ ನಿರ್ಧಾರಗಳನ್ನು ರಕ್ಷಿಸುತ್ತದೆ. ಹೀಗಾಗಿ, ಸಂತಾನೋತ್ಪತ್ತಿ, ಗರ್ಭನಿರೋಧ ಮತ್ತು ವಿವಾಹದಂತಹ ವಿಷಯಗಳಲ್ಲಿ ಆಯ್ಕೆಗಳು ಮತ್ತು ನಿರ್ಧಾರಗಳು ರಕ್ಷಣೀಯವಾಗಿವೆ.

ವಿಶೇಷ ವಿವಾಹ ಕಾಯ್ದೆ, 1954, ಅಂತರ್-ಧಾರ್ಮಿಕ, ಅಂತರ್ಜಾತಿ ವಿವಾಹಗಳನ್ನು ಸ್ಪಷ್ಟವಾಗಿ ಎತ್ತಿಹಿಡಿದಿದೆ. Pic: Pixabay

ಒಪ್ಪಿಗೆ ಅಪರಾಧವಲ್ಲ

ವಾಸ್ತವವಾಗಿ, ನವತೇಜ್ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ಎತ್ತಿಹಿಡಿದಿದ್ದು, ತಮ್ಮ ಸಾಂವಿಧಾನಿಕವಾಗಿ ಸಂರಕ್ಷಿಸಲ್ಪಟ್ಟ ಲೈಂಗಿಕತೆಯ ಹಕ್ಕನ್ನು ಚಲಾಯಿಸಲು ಬಯಸುವ ವ್ಯಕ್ತಿಗಳ ನಡುವೆ ಒಮ್ಮತದ ಕೃತ್ಯಗಳನ್ನು ಅಪರಾಧೀಕರಿಸುವುದು ಸರ್ಕಾರದ ಕಾನೂನುಬಾಹಿರ ಕ್ರಮವಾಗಿದೆ ಎಂಬ ವಿಚಾರವನ್ನು. ಈ ಕೃತ್ಯದಿಂದ ಸರ್ಕಾರ ತನ್ನ ನಾಗರಿಕರಿಗೆ ಅನ್ಯೋನ್ಯತೆಯ ಹಕ್ಕನ್ನು ನಿರಾಕರಿಸುತ್ತದೆ. ಪ್ರತಿಯೊಬ್ಬ ವ್ಯಕ್ತಿಯು ಸಂಗಾತಿ ಆಯ್ಕೆಯ ಹಕ್ಕನ್ನು ಹೊಂದಿರುತ್ತಾನೆ ಮತ್ತು ತನ್ನ ಜೀವನದಲ್ಲಿ ಹೊಂದಲು ಬಯಸುವ ಸಂಬಂಧದ ಸ್ವರೂಪವನ್ನು ನಿರ್ಧರಿಸುವ ಸ್ವಾತಂತ್ರ್ಯವನ್ನೂ ಹೊಂದಿರುತ್ತಾನೆ ಎಂದೂ ಸುಪ್ರೀಂ ಕೋರ್ಟ್ ಎತ್ತಿಹಿಡಿದಿದೆ.

ಶಾಫಿನ್ ಜಹಾನ್ ಪ್ರಕರಣದಲ್ಲಿ, ಇಪ್ಪತ್ನಾಲ್ಕು ವರ್ಷದ ಮಹಿಳೆಯೊಬ್ಬಳು ತನ್ನ ಆಯ್ಕೆಯ ಪುರುಷನೊಂದಿಗೆ ಮದುವೆಯಾದದ್ದನ್ನು ಕೇರಳ ಹೈಕೋರ್ಟ್ ರದ್ದು ಮಾಡಿದ್ದ ತೀರ್ಪನ್ನು ಸುಪ್ರೀಂ ಕೋರ್ಟ್ ಬದಿಗಿರಿಸಿತು. ಇದು ಆಕೆಯ ತಂದೆ “ಲವ್ ಜಿಹಾದ್” ಹೆಸರಿನಲ್ಲಿ ಸಲ್ಲಿಸಿದ್ದ “ಹೇಬಿಯಸ್ ಕಾರ್ಪಸ್ ಅರ್ಜಿ” (ಅಕ್ರಮ ಬಂಧನ ಅಥವಾ ಜೈಲು ಶಿಕ್ಷೆ) ಆಗಿತ್ತು. ಜೊತೆಗೆ ಸುಪ್ರೀಂ ಕೋರ್ಟ್ ಎತ್ತಿಹಿಡಿದಿದ್ದು ಏನಂದರೆ ಜೀವನ ಸಂಗಾತಿಯನ್ನು ಆಯ್ಕೆ ಮಾಡುವ ಮಹಿಳೆಯ ಹಕ್ಕು ಸ್ವಾಯತ್ತತೆಪೂರ್ಣವಾಗಿದ್ದು, ಅದು “ನಿಕಟ ವೈಯಕ್ತಿಕ ನಿರ್ಧಾರಗಳ” ಕ್ಷೇತ್ರಕ್ಕೆ ಸೇರುವುದಲ್ಲದೆ, “ಜೀವನ ಸಂಗಾತಿಯನ್ನು ಆಯ್ಕೆ ಮಾಡುವ ವ್ಯಕ್ತಿಯ ಪರಮ ಹಕ್ಕಾಗಿದ್ದು, ಅದರ ಮೇಲೆ ಮತ/ ಧರ್ಮಶ್ರದ್ಧೆಗಳ ವಿಷಯಗಳು ಕನಿಷ್ಠ ಪರಿಣಾಮವನ್ನೂ ಬೀರುವುದಿಲ್ಲ”.

ಲತಾ ಸಿಂಗ್  ವರ್ಸಸ್ ಉ.ಪಿ ರಾಜ್ಯ ಸರ್ಕಾರ [(2006) 5 SCC 475] ಮೊಕದ್ದಮೆಯಲ್ಲಿ ಲಿವ್-ಇನ್ ಸಂಬಂಧಗಳು ಸಹ ಅಪರಾಧವಲ್ಲ ಎಂದು ಸುಪ್ರೀಂ ಕೋರ್ಟ್ ಅಭಿಪ್ರಾಯಪಟ್ಟಿದೆ ಮತ್ತು ಅಂತರ್ಜಾತಿ ಅಥವಾ ಅಂತರ್-ಧಾರ್ಮಿಕ ವಿವಾಹಗಳಲ್ಲಿ ವ್ಯಕ್ತಿಗಳಿಗೆ ರಕ್ಷಣೆ ನೀಡುವಂತೆ ದೇಶಾದ್ಯಂತ ಆಡಳಿತ ಮತ್ತು ಪೊಲೀಸ್ ಅಧಿಕಾರಿಗಳಿಗೆ ನಿರ್ದೇಶನ ನೀಡಿದೆ. 

ಈ ಜೋಡಿಗಳ  ರಕ್ಷಣೆ 

ವಿವಿಧ “ಮರ್ಯಾದೆ  ಹತ್ಯೆಗಳು” (honour killings) ನಡೆಯುತ್ತಿರುವ ಹಿನ್ನೆಲೆಯಲ್ಲಿ, ಶಕ್ತಿ ವಾಹಿನಿ ವರ್ಸಸ್ ಯೂನಿಯನ್ ಆಫ್ ಇಂಡಿಯಾ (ಯುಒಐ) ಮತ್ತು ಇತರರು  [AIR 2018 SC 1601] ಮೊಕದ್ದಮೆಯಲ್ಲಿ ಸುಪ್ರೀಂ ಕೋರ್ಟ್, ಅಂತರ್ಜಾತಿ ಅಥವಾ ಅಂತರ್-ಧಾರ್ಮಿಕ ವಿವಾಹಗಳಿಗೆ ಕಾಲಿಡುವ ದಂಪತಿಗಳ ರಕ್ಷಣೆಯನ್ನು ಖಚಿತಪಡಿಸಿಕೊಳ್ಳಲು ಹಲವಾರು ಶಿಫಾರಸುಗಳನ್ನು ಸೂಚಿಸಿದೆ. ‘ಮರ್ಯಾದೆ ಹತ್ಯೆಗಳ’ ಸಾಮಾಜಿಕ ಕೇಡಿನ ವಿರುದ್ಧ ಹೋರಾಡಲು ನ್ಯಾಯಾಲಯವು ‘ಸತಿ’ ಮತ್ತು ‘ವರದಕ್ಷಿಣೆ’ ರದ್ದುಗೊಳಿಸುವ ಮಾದರಿಯಲ್ಲಿ ಕಾನೂನನ್ನು ಸೂಚಿಸಿತು. ಇಬ್ಬರು ವಯಸ್ಕರು ಒಬ್ಬರನ್ನೊಬ್ಬರು ಜೀವನ ಸಂಗಾತಿಯನ್ನಾಗಿ ಒಪ್ಪಿಕೊಂಡಾಗ, ಅದು ಅವರ ಆಯ್ಕೆಯ ಅಭಿವ್ಯಕ್ತಿಯಾಗಿದೆ – ಇದು ಸಂವಿಧಾನದ 19 ಮತ್ತು 21 ನೇ ವಿಧಿಗಳ ಅಡಿಯಲ್ಲಿ ಗುರುತಿಸಲ್ಪಟ್ಟಿದ್ದು – ಅದನ್ನು ರಕ್ಷಿಸಬೇಕಾಗಿದೆ ಎಂಬುದನ್ನು ಎತ್ತಿಹಿಡಿಯಿತು. ಇದು ವರ್ಗ, ಮರ್ಯಾದೆ ಅಥವಾ ಗುಂಪು-ಚಿಂತನೆಯ ಪರಿಕಲ್ಪನೆಗಳಿಗೆ ಬಲಿಯಾಗುವುದಿಲ್ಲ, ಏಕೆಂದರೆ ಅವು ಕಿಂಚಿತ್ತೂ ನ್ಯಾಯಸಮ್ಮತತೆಯನ್ನು ಹೊಂದಿರುವುದಿಲ್ಲ.

ವಾಸ್ತವವಾಗಿ, ನಮ್ಮ ಸಂವಿಧಾನದ ಬಲ ಇರುವುದು ಪ್ರತಿಯೊಬ್ಬ ವ್ಯಕ್ತಿಯ ಸಂಗಾತಿ ಮತ್ತು ವಿವಾಹದ ಒಳಗೆ ಅಥವಾ ಹೊರಗಿನ ಅನ್ಯೋನ್ಯತೆಗಳ ಆಯ್ಕೆಯ ವಿಷಯದಲ್ಲಿ ಅವರ ರಕ್ಷಣೆ ಖಾತರಿಪಡಿಸುವುದರಲ್ಲಿ ಎಂಬುದು ಸ್ಪಷ್ಟವಾಗಿದೆ.

ಈ ಕಾನೂನುಗಳು ಅಸಂವಿಧಾನಿಕ

ಹೀಗಿರುವಾಗ, ಅಂತರ್ಜಾತಿ ಮತ್ತು ಅಂತರ್-ಧಾರ್ಮಿಕ ವಿವಾಹಗಳನ್ನು ರಕ್ಷಿಸುವ ಬದಲು, ವಿಶೇಷ ವಿವಾಹ ಕಾಯ್ದೆ ಮಾತ್ರವಲ್ಲ, ಸಂವಿಧಾನವನ್ನೇ ಸಂಪೂರ್ಣವಾಗಿ ಹಾಳುಮಾಡುವ ಹೊಸ ಕಾನೂನುಗಳನ್ನು ಪ್ರಸ್ತಾಪಿಸಲಾಗುತ್ತಿದೆ.

ದೇಶಾದ್ಯಂತ ಭಾರತೀಯ ಜನತಾ ಪಕ್ಷ ಆಡಳಿತದಲ್ಲಿರುವ ರಾಜ್ಯ ಸರ್ಕಾರಗಳು ಈ ಕಾನೂನುಗಳ ಉದ್ದೇಶ  “ಲವ್-ಜಿಹಾದ್” ಎಂದು ಕರೆಯುವ ವಿದ್ಯಮಾನವನ್ನು ತಡೆಯುವುದು ಎಂದು ಭರವಸೆ ನೀಡಿವೆ. ಉತ್ತರ ಪ್ರದೇಶ ಸರ್ಕಾರವು ಈಗಾಗಲೇ 2020 ರಲ್ಲಿ “ಉತ್ತರಪ್ರದೇಶದ ಕಾನೂನುಬಾಹಿರ ಮತಾಂತರದ ತಡೆ ಆಜ್ಞೆ” ಎಂಬ ಸುಗ್ರೀವಾಜ್ಞೆಯನ್ನು ಅಂಗೀಕರಿಸಿದೆ. ಇದು ಜಾರಿಗೆ ಬಂದ ನಂತರ ನಡೆದ ಮೂರು ಘಟನೆಗಳ ಕಂಡು ಇದರ ಉದ್ದೇಶ ಮತ್ತು ಬಳಕೆ ಸ್ಪಷ್ಟವಾಗಿದೆ.

ಒಬ್ಬ ಮುಸ್ಲಿಂ ಪುರುಷ ಮತ್ತು ಅವನ ಪತ್ನಿ (22 ವರ್ಷದ ಹಿಂದೂ ಮಹಿಳೆ) ಮೊರಾದಾಬಾದ್‌ನಲ್ಲಿ ತಮ್ಮ ಮದುವೆಯನ್ನು ನೋಂದಾಯಿಸಲು ಪ್ರಯತ್ನಿಸಿದಾಗ, ಆತನನ್ನು   ಮತ್ತು ಆತನ ಸಹೋದರನನ್ನು ಬಂಧಿಸಲಾಯಿತು. ಈ ಮೂವರನ್ನು ಬಲವಂತವಾಗಿ ಪೊಲೀಸ್ ಠಾಣೆಗೆ ಭಜರಂಗದಳದವರು ಆರೋಪಿಗಳನ್ನಾಗಿಸಿ ಕರೆದೊಯ್ದರು. ತನ್ನ ಸ್ವಂತ ಇಚ್ಛೆಯಿಂದ ತಾನು ಅವನನ್ನು ಮದುವೆಯಾಗಿದ್ದೇನೆ ಎಂಬ ಮಹಿಳೆಯ ಮನವಿಯನ್ನು ಪರಿಗಣಿಸಲಾಗಿಲ್ಲ.

ಮತ್ತೊಂದು ಘಟನೆಯಲ್ಲಿ, 21 ವರ್ಷದ ಮುಸ್ಲಿಂ ವ್ಯಕ್ತಿಯನ್ನು, ಆತನ 21 ವರ್ಷದ ಸಂಗಾತಿ ಅವನನ್ನು ಪ್ರೇಮಿಸುವುತ್ತಿರುವುದಾಗಿ ವಾದಿಸಿದರೂ ಸಹ ಅಳಿಗಡದಿಂದ ಬಂಧಿಸಲಾಯಿತು. ಬಿಜೆಪಿಯು ವರ್ಣಭೇದ ನೀತಿಯನ್ನು ಜಾರಿಗೊಳಿಸಲು ಪಣ ತೊಟ್ಟಿರುವುದರಿಂದ ಲವ್-ಜಿಹಾದ್‌ ಎಂಬ ಸುಳ್ಳು-ಭಯಕ್ಕೆ ಕಾನೂನುಬದ್ಧವಾದ ಪ್ರೇರೇಪಣೆ ಸಿಕ್ಕಿದೆ.

ಈ ಕಾನೂನುಗಳು ಕೇವಲ ಕೋಮುವಾದ ತುಂಬಿದ ಮತ್ತು ನ್ಯಾಯಾಲಯಗಳು ವಿಧಿಸಿರುವ ಕಾನೂನಿಗೆ ವಿರುದ್ಧವಾದವು ಅಲ್ಲ.. ಇವು ಸಾಂವಿಧಾನಿಕ ನೈತಿಕತೆಯನ್ನೂ ಹೊಂದಿಲ್ಲ. ಈ ನೈತಿಕತೆಯು ಕೇವಲ ಸಂವಿಧಾನಿಕತೆಯ ಮೂಲ ತತ್ವಗಳನ್ನು ಅಕ್ಷರಶಃ ಪಠ್ಯ ರೀತಿಯಲ್ಲಿ ಆಚರಿಸುವುದಕ್ಕೆ ಸೀಮಿತವಾಗಿಲ್ಲ ಎಂದು ನಾವು ನೆನಪಿನಲ್ಲಿಟ್ಟುಕೊಳ್ಳಬೇಕು. ಬಹುತ್ವವುಳ್ಳ ಮತ್ತು ಎಲ್ಲರನ್ನು ಒಳಗೊಂಡ ಸಮಾಜವನ್ನು ರೂಪಿಸುವಂತಹ ವಿಶಾಲ ಪ್ರಮಾಣದ ಸದ್ಗುಣಗಳನ್ನು ಅದು ತನ್ನೊಳಗೆ ಅಳವಡಿಸಿಕೊಳ್ಳಬೇಕು. ಅವರು ಎತ್ತಿಹಿಡಿಯುವ ವಿಭಜನೆಯು ಭ್ರಾತೃತ್ವ ಮತ್ತು ಪ್ರಜಾಪ್ರಭುತ್ವದ ಕಲ್ಪನೆಗೆ ವಿರುದ್ಧವಾಗಿದೆ.

ಬಾಬಾಸಾಹೇಬ್ ಡಾ.ಬಿ.ಆರ್ ಅಂಬೇಡ್ಕರ್. “ದಿ ಅನ್ನಿಹಿಲೇಷನ್ ಆಫ್ ಕ್ಯಾಸ್ಟ್” ದಲ್ಲಿ , ಸಾಮಾಜಿಕ ಪೊರೆತೂರ್ಪಿನ (endosmosis) ಅಗತ್ಯತೆಯ ಬಗ್ಗೆ ಮಾತನಾಡುವಾಗ – ಇದು  ಭ್ರಾತೃತ್ವ, ಪ್ರಜಾಪ್ರಭುತ್ವದ ಇನ್ನೊಂದು ಹೆಸರು, ಎನ್ನುತ್ತಾರೆ. “ಆದರ್ಶ ಸಮಾಜವು ಸಂಚಾರಿ ಆಗಿರಬೇಕು, ಒಂದು ಭಾಗದಲ್ಲಿ ನಡೆಯುತ್ತಿರುವ ಬದಲಾವಣೆಯನ್ನು ಇತರ ಭಾಗಗಳಿಗೆ ತಲುಪಿಸಲು ಕವಲುಗಳಿಂದ ತುಂಬಿರಬೇಕು. ಆದರ್ಶ ಸಮಾಜದಲ್ಲಿ ಒಂದು ಭಾಗದಲ್ಲಿ ನಡೆಯುತ್ತಿರುವ ಬದಲಾವಣೆಯನ್ನು ಇತರ ಭಾಗಗಳಿಗೆ ತಲುಪಿಸಲು ಅನೇಕ ಹಿತಾಸಕ್ತಿ-ಮಾರ್ಗಗಳು ಇರಬೇಕು. ಆದರ್ಶ ಸಮಾಜದಲ್ಲಿ ಪ್ರಜ್ಞಾಪೂರ್ವಕವಾಗಿ ಸಂವಹಿಸುವ ಮತ್ತು ಹಂಚಲ್ಪಡುವ ಅನೇಕ ಆಸಕ್ತಿಗಳು ಇರಬೇಕು. ಸಂಘದ ಇತರ ವಿಧಾನಗಳೊಂದಿಗೆ ವೈವಿಧ್ಯಮಯ ಮತ್ತು ಉಚಿತ ಸಂಪರ್ಕದ ಅಂಶಗಳು ಇರಬೇಕು. ಬೇರೆ ರೀತಿಯಲ್ಲಿ ಹೇಳುವುದಾದರೆ, ಸಾಮಾಜಿಕ ಎಂಡೋಸ್ಮೋಸಿಸ್ ಇರಬೇಕು. ಇದು ಭ್ರಾತೃತ್ವ, ಇದು ಪ್ರಜಾಪ್ರಭುತ್ವದ ಮತ್ತೊಂದು ಹೆಸರು. ಪ್ರಜಾಪ್ರಭುತ್ವವು ಕೇವಲ ಸರ್ಕಾರದ ಒಂದು ರೂಪವಲ್ಲ. ಇದು ಮುಖ್ಯವಾಗಿ ಸಂಯೋಜಿತ ಸಂಪರ್ಕ ಅನುಭವದ, ಎಲ್ಲ ಒಡಗೂಡಿ ಬದುಕುವ ವಿಧಾನವಾಗಿದೆ. ಇದು ಮೂಲಭೂತವಾಗಿ ಒಬ್ಬರ ಸಹ ಜೀವಿಗಳ ಬಗ್ಗೆ ಗೌರವಾದರಗಳ ಮನೋಭಾವವಾಗಿದೆ.”

ಈ ರೀತಿ ಬೆಸೆದ, ಒಡಗೂಡಿದ ಜೀವನವೇ ವಿಶೇಷ ವಿವಾಹ ಕಾಯ್ದೆಯ ರೂಪದಲ್ಲಿ ಕಾನೂನುಬದ್ಧ ಮಾರ್ಗವನ್ನು ಕಂಡುಕೊಳ್ಳುತ್ತದೆ. ಇದು ನ್ಯಾಯಾಲಯಗಳ ನಿರ್ದೇಶನಗಳ ಮೂಲಕ ರಾಜ್ಯದ ರಕ್ಷಣೆಯನ್ನು ಹೊಂದಿದೆ. ಈ ಭ್ರಾತೃತ್ವವನ್ನು ವಿರೋಧಿಸುವ ಹೊಸ ಕಾನೂನುಗಳನ್ನು ತರುವ ಮೂಲಕ, ರಾಜ್ಯವು ಖಾಪ್ ಪಂಚಾಯಿತಿಗಳು ಮತ್ತು ಉಗ್ರಗಾಮಿ ಧಾರ್ಮಿಕ ಸಂಘಟನೆಗಳ ಕ್ರಮಗಳನ್ನು ನ್ಯಾಯಸಮ್ಮತಗೊಳಿಸುವುದಲ್ಲದೆ, ವಾಸ್ತವವಾಗಿ, ಅವುಗಳ ಪಾತ್ರವನ್ನೇ ವಹಿಸಿಕೊಳ್ಳುತ್ತಿದೆ.

— ಕ್ಲಿಫ್ಟನ್ ಡಿ’ರೋಜಾರಿಯೊ ಮತ್ತು ಮೈತ್ರೇಯಿ ಕೃಷ್ಣನ್

Read the original in English here.

Also read:

About our volunteer translator

Madhusudhan Rao is a long-time resident of South Bengaluru. He works in the IT sector but dabbles in other passions from time to time, mainly centred around volunteering, teaching and language.

Leave a Reply

Your email address will not be published. Required fields are marked *

Similar Story

‘Aashiyana dhoondte hain’: The sorry tale of people looking for a home in Mumbai

Renting a home in Mumbai often proves to be a nightmare as people face discrimination on multiple grounds — caste, religion, marital status etc.

“Ek Akela Is Shehar MeinRaat Mein Aur Dopahar MeinAabodaana Dhoondta Hai Aashiyana Dhoondta Hai” (A single, solitary man seeks day and night for his fortune and a shelter in this city). These lines by Gulzar — sung in the rich, deep voice of Bhupinder for the movie Gharonda (1977) and mouthed by Amol Palekar wearing a haggard, defeated look on screen — resonate among many youngsters in Mumbai even today, as they look for a sanctuary in the city, a space they can call home. Mumbai, with its charm and promises of a better future, draws people from all over the…

Similar Story

No place to call home as Narikuravas living under Medavakkam flyover face eviction

The flyover beautification project under Singara Chennai could mean displacement for many tribal families living here for years.

Makeshift homes made with mosquito nets, broken chairs, and tables and groups of families making and selling beaded ornaments under Chennai’s longest flyover. This may be a familiar sight for commuters travelling along Velachery, Madipakkam and Sholinganallur. Ever wondered who are these people and why they live on the streets?  The Narikurava tribal community living under the Medavakkam flyover in Chennai faces daily struggles that often go unnoticed. The 2.3-km unidirectional flyover, inaugurated in May 2022, facilitates faster travel from Tambaram to Velachery and is a boon for commuters. But families living under the overpass have many concerns. They face…