ಬೆಂಗಳೂರಿನಲ್ಲಿ ವಾರ್ಡ್ ಸಮಿತಿಗಳು ಏಕೆ ಪರಿಣಾಮಕಾರಿಯಾಗಿಲ್ಲ? ಬಿಬಿ‍ಎಂಪಿ ಎಂದರೆ ಕೌನ್ಸಿಲರ್‌ಗಳ “ಮಹಾರಾಜಾ ಕಾಂಪ್ಲೆಕ್ಸ್”!

ಬೆಂಗಳೂರಿನ ಕೇವಲ ಅರ್ಧದಷ್ಟು ವಾರ್ಡ್‌ಗಳು ವಾರ್ಡ್ ಸಮಿತಿ ಸಭೆಗಳನ್ನು ನೆಡೆಸುತ್ತವೆ. ಮತ್ತು ಸಮಿತಿಯ ಸದಸ್ಯರಿಗೆ ಮಾತಿಗೆ ಯಾವುದೇ ಅವಕಾಶ‌ ನೀಡದೇ, ಕೌನ್ಸಿಲರ್‌ಗಳು ಏಕಪಕ್ಷೀಯ ನಿರ್ಧಾರಗಳನ್ನು ತೆಗೆದುಕೊಳ್ಳುವುದರಿಂದ, ಯಾವುದೇ ಮಾಹಿತಿ ಹಂಚಿಕೊಳ್ಳದಿರುವುದರಿಂದ, ಸಭೆಗಳನ್ನು ಯದ್ವಾತದ್ವ ನಿಶ್ಚಯಿಸುವುದರಿಂದ ಈ ಸಭೆಗಳು ಸಾಮಾನ್ಯವಾಗಿ ಪರಿಣಾಮಕಾರಿಯಾಗಿರುವುದಿಲ್ಲ

Translated by Omshivaprakash H L and Mukund Gowda

ಇಪ್ಪತ್ತಾರು ವರ್ಷಗಳ ಹಿಂದೆ, 1993 ರ ಜೂನ್ 1 ರಂದು ನಗರ ಆಡಳಿತದಲ್ಲಿ “ಜನರಿಗೆ ಅಧಿಕಾರ” ನೀಡಲು 74 ನೇ ಸಾಂವಿಧಾನಿಕ ತಿದ್ದುಪಡಿ ಅಥವಾ ನಾಗರಪಾಲಿಕಾ ಕಾಯ್ದೆಯನ್ನು ಜಾರಿಗೆ ತರಲಾಯಿತು. 74 ನೇ ಸಿಎ ಅಡಿಯಲ್ಲಿ, ವಿಕೇಂದ್ರೀಕರಣಕ್ಕೆ ಮಹತ್ವ ನೀಡಿ, ನಾಗರಿಕರ ಭಾಗವಹಿಸುವಿಕೆ ಮತ್ತು ಹೊಣೆಗಾರಿಕೆಯನ್ನು ಹೆಚ್ಚಸಲು  ಮೂರು ಲಕ್ಷಕ್ಕೂ ಹೆಚ್ಚಿನ ಜನಸಂಖ್ಯೆ ಹೊಂದಿರುವ ಎಲ್ಲಾ ಪುರಸಭೆ ಸಂಸ್ಥೆಗಳಲ್ಲಿ ವಾರ್ಡ್ ಸಮಿತಿಗಳನ್ನು ರಚಿಸಬೇಕಾಗಿತ್ತು.

ವಾರ್ಡ್ ಸಮಿತಿಯ ಸದಸ್ಯರು ವಾರ್ಡ್‌ನಲ್ಲಿ ಕೈಗೊಂಡ ಕೆಲಸಗಳನ್ನು ವಿಶ್ಲೇಷಿಸುವುದು, ಅಭಿವೃದ್ಧಿ ಯೋಜನೆಯನ್ನು ರಚಿಸುವುದು, ವಿವಿಧ ಕಾಮಗಾರಿಗಳಿಗೆ ಬಜೆಟ್ ಹಂಚಿಕೆಯನ್ನು ನಿರ್ಧರಿಸುವುದು ಇತ್ಯಾದಿಗಳನ್ನು ಮಾಡಬೇಕಾಗಿರುತ್ತದೆ. ಆದರೆ ಅನೇಕ ವಾರ್ಡ್‌ಗಳಲ್ಲಿ, ಸಭೆಗಳು ಅನಿರ್ಧಿಷ್ಟವಾಗಿದೆ, ‍ಸಮಿತಿಯ ಸದಸ್ಯರಿಗೆ ಮಾತಿಗೆ ಯಾವುದೇ ಅವಕಾಶ‌ ನೀಡದೇ, ಕೌನ್ಸಿಲರ್‌ಗಳು ಏಕಪಕ್ಷೀಯ ನಿರ್ಧಾರಗಳನ್ನು  ತೆಗೆದುಕೊಳ್ಳುತ್ತಾರೆ.

ಇನ್ನು ಹಲವು ವಾರ್ಡ್‌ಗಳಲ್ಲಿ, ಸಭೆಗಳು ಕೇವಲ ಕುಂದುಕೊರತೆ ಹೇಳಿಕೊಳ್ಳುವ ವೇದಿಕೆಗಳಾಗಿ ಮಾರ್ಪಟ್ಟಿವೆ.‌ ಅದಾಗ್ಯೂ  ಈ ಕುಂದುಕೊರತೆಗಳನ್ನು ನೋಂದಾಯಿಸುವುದಿಲ್ಲ ಅಥವಾ ಪರಿಹರಿಸಲಾಗಿಲ್ಲ. ಅಕ್ಟೋಬರ್‌ನಲ್ಲಿ, CIVIC(ಸಿವಿಕ್)‍ ಮೂಲಕ ಶಾಂತಿನಗರ ವಾರ್ಡ್ ಕಚೇರಿಯಲ್ಲಿ ಕುಂದುಕೊರತೆಗಳ ಪರಿಹಾರ ಡೆಸ್ಕ್ ಸ್ಥಾಪಿಸಲು ಮುಂದಾಗಿದ್ದೇವೆ. ಅಧಿಕೃತ ವಾರ್ಡ್ ಸಮಿತಿ ಸಭೆಗೂ ಮುನ್ನ ಒಂದು ಗಂಟೆ ಕಾಲ ಈ ಡೆಸ್ಕ್ ಕಾರ್ಯನಿರ್ವಹಿಸುತ್ತದೆ, ಇದರಿಂದಾಗಿ ಸಭೆ ಸರಾಗವಾಗಿ ನಡೆಯುವಂತೆ ನೋಡಿಕೊಳ್ಳಲಾಗುತ್ತದೆ.

ಆದರೆ ವಾರ್ಡ್ ಸಮಿತಿ ಸಭೆಗಳು ಪರಿಣಾಮಕಾರಿಯಾಗಲು ಇನ್ನೂ ಹೆಚ್ಚಿನ ಬದಲಾವಣೆ  ಆಗಬೇಕಾಗಿದೆ. ಸಭೆಗಳನ್ನು ಏಕೆ ಪರಿಣಾಮಕಾರಿಯಾಗಿಲ್ಲ ಎಂಬುದನ್ನು ಈ ಕೆಳಗೆ ವಿವರಿಸಿದ್ದೇವೆ. 

ಸಭೆಗಳು ಪ್ರಚುರಗೊಳ್ಳದಿರುವುದು

ಹೆಚ್ಚಿನ ವಾರ್ಡ್‌ಗಳಲ್ಲಿ, ಸಭೆಯ ಸೂಚನೆಯನ್ನು/ಆಮಂತ್ರಣವನ್ನು  ಕೇವಲ ಒಂದು ದಿನದ ಮೊದಲು ನೀಡಲಾಗುತ್ತದೆ. ಆದರೆ 2016 ರ ಕರ್ನಾಟಕ ಮಹಾನಗರ ಪಾಲಿಕೆಗಳ (ವಾರ್ಡ್ ಸಮಿತಿ) ನಿಯಮಗಳ ಪ್ರಕಾರ ಸಭೆಯ ಬಗ್ಗೆ ಒಂದು ವಾರ ಮೊದಲು ಸೂಚನೆ ನೀಡಬೇಕಾಗಿದೆ.

ಅಲ್ಲದೆ, ನಿಯಮಗಳ ಪ್ರಕಾರ ಬಿಬಿಎಂಪಿಯ ವೆಬ್‌ಸೈಟ್, ವಾರ್ಡ್ ಕಚೇರಿ ಅಥವಾ ವಾರ್ಡ್‌ನಲ್ಲಿರುವ ಇತರ ಸರ್ಕಾರಿ ಕಚೇರಿಗಳ ಸೂಚನಾ ಫಲಕದಲ್ಲಿ  ಸೂಚನೆಗಳನ್ನು ಹಾಕುವುದಿಲ್ಲವಾದ್ದರಿಂದ, ಅನೇಕ ನಾಗರೀಕರಿಗೆ ಸಭೆಗಳ ಬಗ್ಗೆ ತಿಳಿಯುವುದೇ ಇಲ್ಲ..

ತಿಂಗಳ ಮೊದಲ ಶನಿವಾರ ಸಭೆ ನಡೆಯುವುದಿಲ್ಲ

ಈ ಸಭೆಗಳು ಪ್ರತಿ ತಿಂಗಳ ಮೊದಲ ಶನಿವಾರದಂದು ನಡೆಯಬೇಕು, ಆದರೆ ಇದನ್ನು ಸಾಮಾನ್ಯವಾಗಿ ವಾರದ ದಿನಗಳಿಗೆ ಮುಂದೂಡಲಾಗುತ್ತದೆ.

ಮೇಲ್ನೋಟಕ್ಕೆ ಕೌನ್ಸಿಲರ್‌ಗಳು, ವಾರ್ಡ್ ಸಮಿತಿ ಸದಸ್ಯರು ಮತ್ತು ನಾಗರೀಕರು ಸಭೆಗಳಿಗೆ ಹಾಜರಾಗುವುದನ್ನು ತಪ್ಪಿಸಲು  ಹೀಗೆ ಮಾಡುತ್ತಿದ್ದಾರೆಂದು ತೋರುತ್ತದೆ, ಇದರಿಂದಾಗಿ ಅವರು ತಮ್ಮ ಜವಾಬ್ದಾರಿಯಿಂದ ನುಣುಚಿಕೊಳ್ಳಲೂ ಸಾಧ್ಯವಾಗುತ್ತಿದೆ.

ವಾರ್ಡ್ ಸಮಿತಿ ಕಾರ್ಯದರ್ಶಿಗಳು ಏಕಪಕ್ಷೀಯವಾಗಿ ಸಭೆಯ ಬಗ್ಗೆ ಸೂಚನೆ ನೀಡಲು ಸಾಧ್ಯವಿಲ್ಲ; ನಿಯಮಗಳ ಪ್ರಕಾರ “ಅಧ್ಯಕ್ಷ (ಕೌನ್ಸಿಲರ್) ರೊಂದಿಗೆ ಸಮಾಲೋಚಿಸಿ” ಮಾತ್ರ ಸೂಚನೆ ನೀಡಬೇಕೆಂದಿದೆ . ಸಭೆಯ ದಿನಾಂಕವನ್ನು ಕೌನ್ಸಿಲರ್‌ಗಳೇ ನೀಡದಿದ್ದರೂ, ಕಾರ್ಯದರ್ಶಿಗಳು ನ್ಯಾಯಾಲಯದ ಕಟಕಟೆ ಏರಬೇಕು.

ಕಾನೂನುಗಳು ಮತ್ತು ನ್ಯಾಯಾಲಯದ ಆದೇಶಗಳ ಮೂಲಕ ತಮ್ಮ ಮತದಾರರಿಗೆ ಉತ್ತರಿಸಬೇಕೆಂದು ತಮ್ಮ ಮೇಲೆ ಹೇರುವ ಒತ್ತಡವನ್ನು ,ಅನೇಕ ಕೌನ್ಸಿಲರ್‌ಗಳು ಅವಮಾನವೆಂದು ತಿಳಿದಿದ್ದಾರೆ. ಅವರು ಕೇವಲ ತಮ್ಮ ಹಿಂಬಾಲಕರಿಂದ ಹೂಮಾಲೆ ಹಾಕಿಸಿಕೊಳ್ಳಲು ಮತ್ತು ಜಯಕಾರಗಳ ಮೂಲಕ ಜನಪ್ರಿಯತೆ ಗಳಿಸಲು  ಒಗ್ಗಿಕೊಂಡಿರುತ್ತಾರೆ.

ಸಭೆಗಳಿಗೆ ಯಾವುದೇ ಕಾರ್ಯಸೂಚಿ ಅಥವಾ ನಿರ್ದಿಷ್ಟ ಕಾರ್ಯವಿಧಾನವಿಲ್ಲ

ನಿಯಮಗಳ ಪ್ರಕಾರ, ವಾರ್ಡ್ ಸಮಿತಿ ಸದಸ್ಯರು ಸಭೆಗೆ ಒಂದು ವಾರ ಮೊದಲು ಕಾರ್ಯಸೂಚಿ ವಿಷಯಗಳನ್ನು ಸೂಚಿಸಬೇಕಾಗುತ್ತದೆ. ಸಮಿತಿಯ ಸದಸ್ಯರು ಅಥವಾ ಅಧ್ಯಕ್ಷರನ್ನು ಸಂಪರ್ಕಿಸುವ ಮೂಲಕ ನಾಗರೀಕರು ಸಹ  ತಮ್ಮ ಕುಂದುಕೊರತೆಗಳನ್ನು ಕಾರ್ಯಸೂಚಿಯಲ್ಲಿ ಸೇರಿಸಬೇಕೆಂದು ತಿಳಿಸಬಹುದು. ಆದರೆ ಅನೇಕ ನಾಗರೀಕರಿಗೆ ಈ ಬಗ್ಗೆ ತಿಳಿದಿಲ್ಲ.

ಅನೇಕ ಬಾರಿ, ಯಾವುದೇ ಕಾರ್ಯಸೂಚಿಯನ್ನು ನಿಗದಿಪಡಿಸದ ಕಾರಣ, ಸಭೆಗಳು ನಿಗದಿತ ಕಾರ್ಯವಿಧಾನಗಳಿಲ್ಲದೆ ನೆಡೆಯುತ್ತವೆ. ಇವುಗಳಲ್ಲಿ ಹಿಂದಿನ ಸಭೆಯಲ್ಲಿ ಮಂಡಿಸಿದ ವಿಷಯಗಳ‍ನ್ನು ಓದುವುದು, ಹಿಂದಿನ ಸಭೆಯ ನಿರ್ಣಯಗಳ ಬಗ್ಗೆ ಕೈಗೊಂಡ ಕ್ರಮದ ಬಗ್ಗೆ ವರದಿ ಒದಗಿಸುವುದು, ಕೆಲಸಗಳ ಕಾರ್ಯಕ್ರಮದ ಬಗ್ಗೆ ಮಾಹಿತಿ ಮತ್ತು ಬಜೆಟ್ ಹಂಚಿಕೆ ಇತ್ಯಾದಿ ಒಳಗೊಂಡಿರುತ್ತದೆ.

ವಾರ್ಡ್ ಸಮಿತಿ ಸದಸ್ಯರಿಗೆ ಯಾವುದೇ ನಿರ್ದಿಷ್ಟ ಮಾಹಿತಿ ನೀಡದಿರುವುದು

ವಾರ್ಡ್ ಸಮಿತಿ ಸದಸ್ಯರಿಗೆ ನಿಯೋಜಿಸಲಾದ ಜವಾಬ್ದಾರಿಗಳನ್ನು ಪೂರೈಸಲು ಸಾಧ್ಯವಾಗುತ್ತಿಲ್ಲ. ಫೆಬ್ರುವರಿ 2011 ರ ಕೆಎಂಸಿ (ತಿದ್ದುಪಡಿ) ಕಾಯ್ದೆಯ ಪ್ರಕಾರ, ವಾರ್ಡ್ ಸಮಿತಿ ಸದಸ್ಯರು ವಾರ್ಡ್ ಅಭಿವೃದ್ಧಿ ಯೋಜನೆಯನ್ನು ಸಿದ್ಧಪಡಿಸಬೇಕು, ವಾರ್ಡ್ ಕೆಲಸಕಾರ್ಯಗಳ ಮೇಲ್ವಿಚಾರಣೆ ನೆಡೆಸಬೇಕು, ಹಣದ ಸದ್ಬಳಕೆಯನ್ನು ಖಚಿತಪ‍ಡಿಸಿಕೊಳ್ಳಬೇಕು. ಆದರೆ ‍ಆಗಾಗ್ಗೆ, ಅವರಿಗೆ ಈ ಅಂಶಗಳ ಬಗ್ಗೆ ಲಭ್ಯವಿರುವ ಅಧಿಕೃತ ಮಾಹಿತಿಯನ್ನು ನೀಡಲಾಗುವುದಿಲ್ಲ.

ಸಭೆಗಳಲ್ಲಿ, ಕೌನ್ಸಿಲರ್‌ಗಳು ಅಥವಾ ಅವರ ಪ್ರತಿನಿಧಿಗಳು‍ ಯೋಜಿತ ವಾರ್ಡ್ ಕೆಲಸ ಅಥವಾ ಬಜೆಟ್ ಹಂಚಿಕೆಯ ಬಗ್ಗೆ ಮೌಖಿಕ ಹೇಳಿಕೆಗಳನ್ನು ಮಾತ್ರ ನೀಡುತ್ತಾರೆ. ಅವರ ಹೇಳಿಕೆಗಳ ಸತ್ಯಾಸತ್ಯತೆಯನ್ನು ಪರೀಕ್ಷಿಸಲು ಅವರು ಯಾವುದೇ ಆಧಾರಗಳನ್ನು/ದಾಖಲೆಗಳನ್ನು ನೀಡುವುದಿಲ್ಲ.

ಕೌನ್ಸಿಲರ್‌ಗಳು ಏಕಪಕ್ಷೀಯವಾಗಿ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಾರೆ

ಅಲ್ಲದೆ, ವಾರ್ಡ್‌ ಸಮಿತಿ ಸದಸ್ಯರು ಅಥವಾ ನಾಗರೀಕರಿಂದ ಯಾವುದೇ ಭಾಗವಹಿಸುವಿಕೆ/ಸಹಭಾಗಿತ್ವ ಇಲ್ಲದೆ ಕೌನ್ಸಿಲರ್‌ಗಳು ಏಕಪಕ್ಷೀಯವಾಗಿ ಯೋಜನೆಗಳನ್ನು ‘ಮಹಾರಾಜ ಸ್ಥಿತಿ’ ಯಲ್ಲಿ ಅಂತಿಮಗೊಳಿಸುತ್ತಾರೆ. ಉದಾಹರಣೆಗೆ, ಶಾಂತಲಾನಗರ ವಾರ್ಡ್‌ನಲ್ಲಿ, ಡಯಾಲಿಸಿಸ್‌ ಕೇಂದ್ರವನ್ನು ಸ್ಥಾಪಿಸಲು ನೀಡಿದ್ದ 2 ಕೋಟಿ ರೂ.ಗಳ ಸಂಪೂರ್ಣ ಅನುದಾನವನ್ನು ಬೇರೆಡೆಗೆ ತಿರುಗಿಸಲು ಕೌನ್ಸಿಲರ್‌ ಕೇಳಿದರು. ಕಾರಣ – ಇದು ಬಂಡವಾಳ ಹೂಡಿಕೆ ಆಗಿರುವುದರಿಂದ, ವಾರ್ಡ್‌ನಲ್ಲಿ ರಸ್ತೆಗಳು ಮತ್ತು ಫುಟ್‌ಪಾತ್‌ಗಳನ್ನು ನಿರ್ವಹಿಸಲು ಯಾವುದೇ ಹಣ ಉಳಿದಿಲ್ಲ ಎನ್ನುವುದಾಗಿತ್ತು.

ಶಾಂತಿನಗರದಲ್ಲಿ, ಫುಟ್‌ಪಾತ್‌ನಲ್ಲಿ ಮುರಿದ ಚಪ್ಪಡಿಗಳಿಂದಾಗಿ ಪಾದಚಾರಿಗಳು ಚರಂಡಿಗೆ ಬಿದ್ದು ಕಾಲುಗಳನ್ನು ಮುರಿದುಕೊಳ್ಳುವಂತಾಗಿದೆ. ಆದರೆ ವಾರ್ಡ್ ಸಮಿತಿಯ ಕಾರ್ಯದರ್ಶಿಯ ಪ್ರಕಾರ ಮುರಿದ ಚಪ್ಪಡಿಗಳನ್ನು ಬದಲಿಸಲು ಮತ್ತು ಅವುಗಳ ಮೇಲೆ ನಡೆದಾಡಲು ಸಾಧ್ಯವಾಗುವಂತೆ ಮಾಡಲು 1೦,೦೦೦ ರೂ ಕೂಡ ಇಲ್ಲ. ಕೌನ್ಸಿಲರ್ ಅವರ ಪತಿ, “ನಾನು ಟೆಂಡರ್ ಶ್ಯೂರ್ ಅಡಿಯಲ್ಲಿ ಈ ರಸ್ತೆಯ ವೈಟ್-ಟಾಪಿಂಗ್‌ಗಾಗಿ 10 ಕೋಟಿ ರೂ. ಬಜೆಟ್ ಮಾಡಿರುವುದರಿಂದ ಈ ರಸ್ತೆಯಲ್ಲಿ ಎಲ್ಲವೂ ಸರಿಯಾಗುತ್ತದೆ” ಎಂದು ಹೇಳಿದ್ದಾರೆ. ಆದ್ದರಿಂದ, ಮುಂದಿನ ಎರಡು ವರ್ಷಗಳಲ್ಲಿ ಈ ಕೆಲಸ ಪೂರ್ಣಗೊಳ್ಳುವವರೆಗೆ, ನಾಗರೀಕರು ಚರಂಡಿಗೆ ಬೀಳುತ್ತಲೇ ಇರುವುದನ್ನು ಮತ್ತು ಮೂಳೆಗಳನ್ನು ಮುರಿಸಿಕೊಳ್ಳುತ್ತಲೇ ಇರುವುದನ್ನು ನಿರೀಕ್ಷಿಸಬಹುದು!

ವರದಿಗಳ ಪ್ರಕಾರ,  ಅನೇಕ ವಾರ್ಡ್ ಸಮಿತಿ ಸದಸ್ಯರು, ಕೌನ್ಸಿಲರ್ ಅನುಯಾಯಿಗಳಾಗಿರುವುದರಿಂದ, ಸಭೆಗಳಲ್ಲಿ ಮೌನವಾಗಿರುತ್ತಾರೆ ಮತ್ತು ಪ್ರಶ್ನೆಗಳನ್ನು ಕೇಳುವುದಿಲ್ಲ ಎಂದು ತಿಳಿದುಬಂದಿದೆ. ಅಲ್ಲದೆ, ಮಹಿಳಾ ಕೌನ್ಸಿಲರ್‌ಗಳ ಗಂಡಂದಿರೇ ವಾರ್ಡ್‌ಗಳನ್ನು ‍ನಿರ್ವಹಿಸುವ ಪ್ರಸಂಗವಿರುವುದು ಮತ್ತು ವಾರ್ಡ್ ಸಮಿತಿ ಸಭೆಗಳಿಗೆ ಅವರೇ ಪರೋಕ್ಷವಾಗಿ ಅಧ್ಯಕ್ಷತೆ ವಹಿಸುವ ಅಭ್ಯಾಸ ಅತಿರೇಕವಾಗಿದೆ.

ಬೆಂಗಳೂರಿನಲ್ಲಿ ವಾರ್ಡ್ ಸಮಿತಿ ಸಭೆಗಳ ಇತಿಹಾಸ

ಬೆಂಗಳೂರಿನ ಬಿಬಿಎಂಪಿಯು ವಾರ್ಡ್ ಸಮಿತಿಗಳನ್ನು ರಚಿಸಿದ ಕರ್ನಾಟಕದ ಏಕೈಕ ಪುರಸಭೆ ಎನ್ನಬಹುದು. ಹಾಗೂ ಇಲ್ಲಿಯೂ ಸಹ, ಇದಕ್ಕೆ ದಶಕಗಳ ನಾಗರೀಕ ಪ್ರಯತ್ನ ಅವಶ್ಯವಾಯಿತು:

  • 1999-2001, 2003-2006: ಈ ಅಲ್ಪಾವಧಿಯಲ್ಲಿ ವಾರ್ಡ್ ಸಮಿತಿಗಳು ಅಸ್ತಿತ್ವದಲ್ಲಿದ್ದವು
  • 2006-2010: ಚುನಾಯಿತ ಕೌನ್ಸಿಲ್ ಇಲ್ಲದ ಕಾರಣ ವಾರ್ಡ್ ಸಮಿತಿಗಳಿರಲಿಲ್ಲ; ನಗರವನ್ನು ಆಗ ನಿರ್ವಾಹಕರು ನಿಯಂತ್ರಿಸುತ್ತಿದ್ದರು
  • 2013: ಹೈಕೋರ್ಟ್ ಆದೇಶದಂತೆ ಸಮಿತಿಗಳನ್ನು ಮತ್ತೆ ರಚಿಸಲಾಯಿತು, ಆದರೆ ಈ ಕುರಿತಾದ ಹೊಸ ನಿಯಮಗಳನ್ನು ಕೆಎಂಸಿ (ತಿದ್ದುಪಡಿ) ಕಾಯ್ದೆ, 2011 ರ ಅಡಿಯಲ್ಲಿ ರೂಪಿಸಲಾಗಿಲ್ಲವಾದ್ದರಿಂದ ಕಾರ್ಯನಿರ್ವಹಿಸಲು ಸಾಧ್ಯವಾಗಲಿಲ್ಲ
  • ಜೂನ್ 2016: 2013 ರ ಹೈಕೋರ್ಟ್ ನಿರ್ದೇಶನದ ನಂತರ ನಿಯಮಗಳನ್ನು ರೂಪಿಸಲಾಯಿತು
  • 2017: ಹೈಕೋರ್ಟ್‌ನ ಮತ್ತೊಂದು ದಂಡನೆಯ ನಂತರ ವಾರ್ಡ್ ಸಮಿತಿಗಳನ್ನು ಮತ್ತೆ ಸ್ಥಾಪಿಸಲಾಯಿತು.. ಇನ್ನೂ, ಮಾಸಿಕ ಸಭೆಗಳಿಲ್ಲ. ನಾಗರೀಕರು ನ್ಯಾಯಾಲಯದ ಕದ ತಟ್ಟುತ್ತಾರೆ, ಇದು ಎಲ್ಲಾ ವಾರ್ಡ್ ಸಮಿತಿಗಳನ್ನು 2017 ರ ನವೆಂಬರ್ 30 ರೊಳಗೆ ಭೇಟಿಯಾಗುವಂತೆ ಆದೇಶಿಸುತ್ತದೆ. ಆದರೆ ಕಾಲು ಭಾಗದಷ್ಟು ವಾರ್ಡ್‌ಗಳು ಮಾತ್ರ ಸಭೆ ನಡೆಸುತ್ತವೆ
  • ಫೆಬ್ರವರಿ 2018: ಕೆಲವು ವಾರ್ಡ್‌ಗಳಲ್ಲಿ ಸಭೆಯನ್ನೇ ನಡೆಸದ ಕಾರಣ ಹೈಕೋರ್ಟ್ ಬಿಬಿಎಂಪಿಗೆ 50,000 ರೂ ದಂಡ ವಿಧಿಸುತ್ತದೆ.
  • ಅಕ್ಟೋಬರ್ 2018: ಸಿಎಫ್‌ಬಿ ಮತ್ತು ಸಿವಿಕ್ ನೇತೃತ್ವದ ನಾಗರೀಕರ ನಿಯೋಗವು ಹೊಸದಾಗಿ ಚುನಾಯಿತರಾದ ಮೇಯರ್ ಗಂಗಾಂಬಿಕೆ ಮಲ್ಲಿಕಾರ್ಜುನ್ ಅವರನ್ನು ಭೇಟಿಯಾಗಿ, ಪ್ರತಿ ತಿಂಗಳ ಮೊದಲ ಶನಿವಾರದಂದು ಸಭೆಗಳನ್ನು ನಡೆಸಲು ಕೌನ್ಸಿಲರ್‌ಗಳಿಗೆ ನಿರ್ದೇಶಿಸುವಂತೆ ಮನವಿ ಮಾಡಿತು. ಬಿಬಿಎಂಪಿ ಕೌನ್ಸಿಲ್ ಸಭೆಯಲ್ಲಿ ಮೇಯರ್ ಈ ಬಗ್ಗೆ ಘೋಷಿಸಿದರು. ಆದರೆ ಯಾವುದೇ ಅಧಿಕೃತ ಸಂವಹನವನ್ನು ವಾರ್ಡ್ ಸಮಿತಿ ಕಾರ್ಯದರ್ಶಿಗಳಿಗೆ ಕಳುಹಿಸಲಾಗಿಲ್ಲ, ಆದ್ದರಿಂದ 2018ರ ನವೆಂಬರ್ ಮೊದಲ ಶನಿವಾರದಂದು ಯಾವುದೇ ಸಭೆಗಳು ನಡೆಯಲಿಲ್ಲ
  • 16 ನವೆಂಬರ್ 2018: ಸಿವಿಕ್ ಸಂಪರ್ಕಿಸಿದ ನಂತರ ಬಿಬಿಎಂಪಿ ಆಯುಕ್ತರು ಸುತ್ತೋಲೆ ಹೊರಡಿಸಿದರು. ಈ ಸುತ್ತೋಲೆ ವಲಯ ಆಯುಕ್ತರಿಗೆ ತಮ್ಮ ವಲಯಗಳಲ್ಲಿನ ಎಲ್ಲಾ ವಾರ್ಡ್ ಸಮಿತಿ ಕಾರ್ಯದರ್ಶಿಗಳು ಪ್ರತಿ ತಿಂಗಳ ಮೊದಲ ಶನಿವಾರದಂದು ಸಭೆ ನಡೆಸುವುದನ್ನು ಖಚಿತಪಡಿಸಿಕೊಳ್ಳಲು ನಿರ್ದೇಶಿಸಿದೆ
  • ಡಿಸೆಂಬರ್ ಮತ್ತು ಮೇ ನಡುವಿನ ಆರು ತಿಂಗಳ ಅವಧಿಯಲ್ಲಿ 198 ಕೌನ್ಸಿಲರ್ಗಳಲ್ಲಿ ಸುಮಾರು 50 ಮಂದಿ ಮಾತ್ರ ನಾಲ್ಕು ಸಭೆಗಳನ್ನು ನಡೆಸಿದ್ದಾರೆ

ಸಭೆಗಳು ಕುಂದುಕೊರತೆ ವೇದಿಕೆಗಳಾಗಿ ಬದಲಾಗುತ್ತಿವೆ

ವಾರ್ಡ್ ಸಮಿತಿ ನಿಯಮಗಳ ಸೆಕ್ಷನ್ 6 (5) ರ ಪ್ರಕಾರ ಸಭೆಗಳು ಸಾರ್ವಜನಿಕರ ಭಾಗವಹಿಸುವಿಕೆಗೆ ಮುಕ್ತವಾಗಿರಬೇಕು. ಆದರೆ ನಿಗದಿತ ಕಾರ್ಯಸೂಚಿಯ ಪ್ರಕಾರ ಸಭೆಯನ್ನು ನಡೆಸಬೇಕಾಗಿರುವುದರಿಂದ, ಸಭೆಯ ನಡುವೆ ಮಾತನಾಡುವ ನಾಗರೀಕರಿಂದ ಚರ್ಚೆಗೆ ಅಡಚಣೆ ಆಗುವುದೇ ಹೆಚ್ಚು. ನಾಗರೀಕರು ಬಿಬಿಎಂಪಿ ಕೌನ್ಸಿಲ್ನ ನಡಾವಳಿಗಳನ್ನು, ಗ್ಯಾಲರಿಯಿಂದ ವೀಕ್ಷಿಸುವ ವೀಕ್ಷಕರಾಗಬಹುದಷ್ಟೇ. ಆದಾಗ್ಯೂ, ಅವರು ಸಭೆಯ ನಡಾವಳಿಗಳನ್ನು ವಿಡಿಯೋಗ್ರಾಫ್ ಮಾಡಲು ಮತ್ತು ಅದನ್ನು ಸಾಮಾಜಿಕ ಜಾಲತಾಣಗಳಲ್ಲಿ ಅಪ್‌ಲೋಡ್ ಮಾಡಲು ಅನುಮತಿಯಿದೆ.

ಆದರೆ ಅನೇಕ ಕೌನ್ಸಿಲರ್‌ಗಳು ವಾರ್ಡ್ ಸಮಿತಿ ಸಭೆಯನ್ನು ಸ್ವತಃ ಕುಂದುಕೊರತೆ ವಿಚಾರಿಸುವ ಸಭೆಯಾಗಿ ಪರಿವರ್ತಿಸಿದ್ದಾರೆ ಮತ್ತು ನಾಗರೀಕರು ತಮ್ಮ ಕುಂದುಕೊರತೆಗಳನ್ನು ಮೌಖಿಕವಾಗಿ ಹೇಳಿಕೊಳ್ಳುವಂತೆ ಮಾಡಿದ್ದಾರೆ. ಸರಿಯಾದ ನಾಯಕತ್ವವಿಲ್ಲದೆ, ಒಬ್ಬರಿಗಿಂತ ಹೆಚ್ಚು ನಾಗರೀಕರು ಎದ್ದುನಿಂತು ಸಮಸ್ಯೆಗಳನ್ನು ಏಕಕಾಲದಲ್ಲಿ ವಿವರಿಸಲು ಪ್ರಯತ್ನಿಸುವುದರಿಂದ; ಕೌನ್ಸಿಲರ್, ವಾರ್ಡ್ ಸಮಿತಿ ಸದಸ್ಯರು, ಅಧಿಕಾರಿಗಳು ಮತ್ತು ನಾಗರೀಕರ ನಡುವೆ ಒಂದೇ ಸಮಯದಲ್ಲಿ ಅನೇಕ ಸಂಭಾಷಣೆಗಳು ನಡೆಯುವುದರಿಂದ; ಅಥವಾ ಕೆಲವು ಸದಸ್ಯರು ಮತ್ತು ಪಾಲ್ಗೊಳ್ಳುವವರು ತಮ್ಮ ಮೊಬೈಲ್ ಫೋನ್‌ಗಳ ಮೂಲಕ ಜೋರಾಗಿ ಮಾತನಾಡುವುದರಿಂದ ಅನೇಕ ಸಭೆಗಳು ಅಸ್ತವ್ಯಸ್ತವಾಗಿರುತ್ತವೆ.

ದುರದೃಷ್ಟವಶಾತ್, ಸಭೆಯ ಮುಂದಿಡುವ ಕುಂದುಕೊರತೆಗಳನ್ನು ಹೆಚ್ಚಾಗಿ ನೋಂದಾಯಿಸಿಕೊಳ್ಳಲಾಗುವುದಿಲ್ಲ. ದೂರುದಾರರು ಟ್ರ್ಯಾಕಿಂಗ್ ಸಂಖ್ಯೆಗಳೊಂದಿಗೆ ಅಥವಾ ಕ್ರಮ ಜರುಗಿಸಿದ ವರದಿಗಳೊಂದಿಗೆ ಸ್ವೀಕೃತಿ ರಶೀತಿಗಳನ್ನು ಪಡೆಯುವುದಿಲ್ಲ, ಇದು ಇಡೀ ಸಭೆಯನ್ನು ಫಲಪ್ರದವಾಗುವುದರಿಂದ ತಪ್ಪಿಸುತ್ತದೆ. ಅನೇಕ ನಾಗರೀಕರ ಸಮಸ್ಯೆಗಳು ಕೇವಲ ಹೇಳಿಕೆಗಳಾಗಿಯೇ ಉಳಿದುಕೊಂಡು ಬಿಡುತ್ತವೆ; ಅಥವಾ ಹಳೆಯ ಕುಂದುಕೊರತೆಗಳನ್ನೇ ಪುನರಾವರ್ತಿಸಲಾಗುತ್ತದೆ, ಹಾಗೂ ಇದಕ್ಕಾಗಿ ಮೌಖಿಕ ಆಶ್ವಾಸನೆಗಳನ್ನು ಮಾತ್ರ ನೀಡಲಾಗುತ್ತದೆ ಎಂದು ದೂರುತ್ತಾರೆ.

ಖಂಡಿತವಾಗಿ, ವಾರ್ಡ್ ಸಮಿತಿ ಮತ್ತು ನಾಗರೀಕರ ನಡುವೆ ಮಾತುಕತೆ ಅತ್ಯಗತ್ಯ. ಆದರೆ ಕೌನ್ಸಿಲರ್ ಮತ್ತು ವಾರ್ಡ್ ಸಮಿತಿ ಸದಸ್ಯರೊಂದಿಗೆ ನಾಗರೀಕರು ತಮ್ಮ ಕುಂದುಕೊರತೆಗಳನ್ನು ನೇರವಾಗಿ ಚರ್ಚಿಸುವ ಅವಕಾಶ ಯಾವುದೇ ನಿಯಮಗಳಲ್ಲಿಲ್ಲ.

2010 ರಲ್ಲಿ, ಆಗಿನ ಬಿಬಿಎಂಪಿ ಆಯುಕ್ತರಾಗಿದ್ದ ಭರತ್ ಲಾಲ್ ಮೀನಾ ಅವರು ಕೌನ್ಸಿಲರ್ ಅಧ್ಯಕ್ಷತೆಯಲ್ಲಿ ಪ್ರತಿ ವಾರ್ಡ್‌ನಲ್ಲಿಯೂ ನಡೆಯಲಿರುವ ‘ಜನಸ್ಪಂದನ’ ಕಾರ್ಯಕ್ರಮಗಳನ್ನು ಬಿಬಿಎಂಪಿ, ಬಿಡಬ್ಲ್ಯೂಎಸ್ಎಸ್‌ಬಿ, ಬೆಸ್ಕಾಮ್ ಮುಂತಾದ ಎಲ್ಲ ಅಧಿಕಾರಿಗಳ ಸಮ್ಮುಖದಲ್ಲಿ ನಡೆಸುವ ಸುತ್ತೋಲೆ ಹೊರಡಿಸಿದ್ದರು. ಈ ಕಾರ್ಯಕ್ರಮ ತಿಂಗಳ ಮೊದಲ ಮತ್ತು ಮೂರನೇ ಶನಿವಾರ ಬೆಳಿಗ್ಗೆ 9-11 ರಿಂದ ನಡೆಯಬೇಕಿದ್ದಿತ್ತು, ಆದರೆ ಅದನ್ನು ಎಂದಿಗೂ ಜಾರಿಗೆ ತರಲಾಗಿಲ್ಲ.

ಇದರ ಜೊತೆಗೆ, ನಾಗರೀಕರು ಔಪಚಾರಿಕ ವಾರ್ಡ್ ಸಮಿತಿ ಸಭೆಯನ್ನು ಅಡ್ಡಿಪಡಿಸದಂತೆ, ತಮ್ಮ ಕುಂದುಕೊರತೆಗಳನ್ನು ನೋಂದಾಯಿಸಲು ಅಥವಾ ಪ್ರತಿಕ್ರಿಯಿಸಲು ಪ್ರತ್ಯೇಕ ಸಮಯವನ್ನು ನಿಗದಿಪಡಿಸುವುದು ಅವಶ್ಯಕವಾಗಿದೆ.

ಶಾಂತಿನಗರದಲ್ಲಿ, ಸಿವಿಕ್ ಮೊದಲೇ ಸೂಚನೆ ನೀಡಿ, ಅಕ್ಟೋಬರ್ 19 ರಂದು ಕುಂದುಕೊರತೆ ಪರಿಹಾರ ಡೆಸ್ಕ್ ಅನ್ನು ಸ್ಥಾಪಿಸಿತು. ಔಪಚಾರಿಕ ವಾರ್ಡ್ ಸಮಿತಿ ಸಭೆ ಪ್ರಾರಂಭವಾಗುವುದಕ್ಕೆ ಒಂದು ಗಂಟೆ ಮೊದಲು ಬೆಳಿಗ್ಗೆ 10.30-11.30 ರಿಂದ ಈ ಡೆಸ್ಕ್ ಕಾರ್ಯನಿರ್ವಹಿಸಿತು. ನಾಗರೀಕರು ತಮ್ಮ ಲಿಖಿತ ಕುಂದುಕೊರತೆಗಳನ್ನು ಕೌನ್ಸಿಲರ್ ಸೌಮ್ಯಾ ಶಿವಕುಮಾರ್ ಅವರಿಗೆ ಸಲ್ಲಿಸಿದರು, ಮತ್ತು ವಾರ್ಡ್ ಸಮಿತಿ ಕಾರ್ಯದರ್ಶಿ ಪ್ರತಿ ಕುಂದುಕೊರತೆಗಳಿಗೆ ಟ್ರ್ಯಾಕಿಂಗ್ ಸಂಖ್ಯೆ ಮತ್ತು ಸ್ವೀಕೃತಿ ಪತ್ರವನ್ನು ನೀಡಿದರು.

ಕುಂದುಕೊರತೆಗಳ ಬಗ್ಗೆ ಕ್ರಮ ಕೈಗೊಂಡ ವರದಿಯನ್ನು ಮುಂದಿನ ವಾರ್ಡ್ ಸಮಿತಿ ಸಭೆಯಲ್ಲಿ ಪರಿಶೀಲಿಸಲಾಗುವುದು. ನಿಯಮಗಳ ಪ್ರಕಾರ, ವಾರ್ಡ್ ಸಮಿತಿಯು ತನ್ನ ನಿರ್ಣಯಗಳನ್ನು ಕಾರ್ಯಗತಗೊಳಿಸಲು ವಿಫಲವಾದ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲು ಬಿಬಿಎಂಪಿ ಆಯುಕ್ತರಿಗೆ ಶಿಫಾರಸು ಮಾಡಬಹುದು. ಆದರೆ ಸ್ವೀಕರಿಸಿದ ಕುಂದುಕೊರತೆಗಳ ಲಿಖಿತ ದಾಖಲೆಗಳು ಮತ್ತು ನಿರ್ಣಯಗಳನ್ನು ಅಂಗೀಕರಿಸಿದರೆ ಮಾತ್ರ ಇದನ್ನು ಮಾಡಲು ಸಾಧ್ಯ.

ಪ್ರತಿ ಅಧಿಕೃತ ವಾರ್ಡ್ ಸಮಿತಿ ಸಭೆಗೆ ಮುಂಚಿತವಾಗಿ ‍ನಾಗರೀಕರ ಕುಂದುಕೊರತೆಗಳನ್ನು ಸ್ವೀಕರಿಸಲು ಒಂದು ಗಂಟೆಯ ಅವಧಿಯನ್ನು ಮೀಸಲಿಡಲು ಶಾಂತಿನಗರ ಕೌನ್ಸಿಲರ್ ಒಪ್ಪಿದ್ದಾರೆ. ಎಲ್ಲಾ ವಾರ್ಡ್‌ಗಳು ಈ ಮಾದರಿಯನ್ನು ಅಳವಡಿಸಿಕೊಂಡರೆ, ವಾರ್ಡ್ ಸಮಿತಿ ಸಭೆಗಳು ಹೆಚ್ಚು ವ್ಯವಸ್ಥಿತವಾಗಿಯೂ, ಗೌಜುಗದ್ದಲಗಳಿಂದ ಹೊರತಾಗಿಯೂ ಮತ್ತು ಹೆಚ್ಚು ಫಲಪ್ರದವಾಗಿಯೂ ಇರಲು ಸಾಧ್ಯವಾಗುತ್ತದೆ.

ಅಗತ್ಯವಿರುವ ಯೋಜನೆಗಳ ಮಾಹಿತಿ ಕೇಂದ್ರದ ಅವಶ್ಯಕತೆ ಇದೆ

ಹೆಚ್ಚುವರಿಯಾಗಿ, ಪ್ರತಿ ವಾರ್ಡ್‌ನಲ್ಲಿಯೂ ಒಂದು ಏಕಗವಾಕ್ಷಿ ಮಾಹಿತಿ ಕೇಂದ್ರವನ್ನು ಸ್ಥಾಪಿಸಿ, ವಿವಿಧ ಇಲಾಖೆಗಳ ಅಡಿಯಲ್ಲಿನ ಯೋಜನೆಗಳಿಗೆ ಮತ್ತು ಇವುಗಳಿಗೆ ಸಂಬಂಧಿಸಿದ ಕುಂದುಕೊರತೆಗಳ ಅರ್ಜಿಗಳನ್ನು ಸ್ವೀಕರಿಸಲು ಅವಕಾಶ ಮಾಡಿಕೊಡಬೇಕು. ಇದರಿಂದ ನಾಗರೀಕರು, ವಿಶೇಷವಾಗಿ ನಗರದ ಬಡವರು, ಒಂದು ಕಚೇರಿಯಿಂದ ಮತೊಂದಕ್ಕೆ ಇವನ್ನು ತಲುಪಿಸಲು ಓಡುವುದನ್ನು ತಪ್ಪಿಸುತ್ತದೆ‌.

ಸಿವಿಕ್ ಸೇರಿದಂತೆ ನಾಗರಿಕ  ಸಂಸ್ಥೆಗಳ ಒಕ್ಕೂಟವು 2017 ರಲ್ಲಿ ಕರ್ನಾಟಕ ಸರ್ಕಾರಕ್ಕೆ ಲಭ್ಯವಾಗಿಸಿದ ‍ಸಾಮಾಜಿಕ ಹೊಣೆಗಾರಿಕೆ ಮಸೂದೆಯಲ್ಲಿ ಈ ಕಲ್ಪನೆಯನ್ನು ಕಟ್ಟಿ ಕೊಡಲಾಗಿತ್ತು. ಬಗೆಹರಿಸಲಾಗದ ಕುಂದುಕೊರತೆಗಳನ್ನು ವಲಯ ಮಟ್ಟಕ್ಕೆ ಮತ್ತು ಬಿಬಿಎಂಪಿ ಪ್ರಧಾನ ಕಚೇರಿಗೆ ಹಸ್ತಾಂತರಿಸುವ ಕಾರ್ಯವಿಧಾನಗಳ ದೂರದೃಷ್ಟಿತ್ವವನ್ನು ಈ ಮಸೂದೆ ಮನಗಂಡಿದೆ.

ಇದೇ ರೀತಿಯ ಸಾರ್ವಜನಿಕ ಹೊಣೆಗಾರಿಕೆ ಮಸೂದೆಯನ್ನು ರಾಜಸ್ಥಾನ ಸರ್ಕಾರ ಅಂಗೀಕರಿಸಲು ಮುಂದಾಗಿದೆ. ರಾಜಸ್ಥಾನ ಸರ್ಕಾರವು ವಾರ್ಡ್-ಮಟ್ಟದ ಮಾಹಿತಿ ಕಿಯೋಸ್ಕ್ ಗಳೊಂದಿಗೆ ಜನರಗೆ ಮಾಹಿತಿ ಪೋರ್ಟಲ್ ಅನ್ನೂ ಪ್ರಾರಂಭಿಸಿದ್ದು, ಯೋಜನೆಗಳ ಮಾಹಿತಿಯನ್ನು ಬಟನ್  ಕ್ಲಿಕ್ ಮಾಡಿದ ತಕ್ಷಣ ಲಭ್ಯವಾಗುವಂತೆ ಮಾಡಿದೆ.

ಈಗ ಬೆಂಗಳೂರಿನಲ್ಲಿ ಬಹಳಷ್ಟು ವಾರ್ಡ್ ಸಮಿತಿ ಸಭೆಗಳು ನೆಡೆಯುತ್ತಿದ್ದರೂ, ಇವು ಪರಿಣಾಮಕಾರಿಯಾಗಿರಬೇಕು. ಚುನಾಯಿತ ಪ್ರತಿನಿಧಿಗಳು ತಮ್ಮ ಹೆಸರು ಉಳಿಯುವ ರೀತಿಯಲ್ಲಿ ಮಾದರಿ ಬದಲಾವಣೆಗಳ ಅಗತ್ಯವನ್ನು ಅರಿತುಕೊಳ್ಳಬೇಕಾಗಿದೆ. ಸಧ್ಯ ಚುನಾಯಿತ ಪ್ರತಿನಿಧಿಗಳು ತಾವು ಮಹಾರಾಜರು ಎಂಬ ಗುಂಗಿನಿಂದ ಹೊರಬಂದು ತಮ್ಮನ್ನು ನಾಗರೀಕರ ಆಕಾಂಕ್ಷೆಗಳನ್ನು ಪೂರೈಸಲು ಆಯ್ಕೆ ಮಾಡಲಾಗಿದೆ ಎಂದು ತಿಳಿಯಬೇಕು. ಇನ್ಮುಂದೆ ಅವರು ಕೇವಲ ಬೆಂಬಲಕ್ಕಾಗಿ ಭಿಕ್ಷೆ ಬೇಡದ, ತಾವು ಪಾವತಿಸುವ ತೆರಿಗೆಯ ಮೇಲಿನ ಪ್ರತಿಯಾಗಿ  ತಮ್ಮ ‘ಸಾರ್ವಜನಿಕ ಸೇವೆಗಳ ಹಕ್ಕನ್ನು’ ಒತ್ತಾಯಿಸುತ್ತಿರುವ ಜಾಗೃತ ನಾಗರೀಕರಿಗೆ ಸ್ಪಂದಿಸುವುದಕ್ಕೆ ಮರು ಹೊಂದಿಸಿ ಕೊಳ್ಳಬೇಕಾಗಿದೆ.

Read the original in English here.

About our volunteer translators

Omshivaprakash H L is a resident of Jayanagar. He works in the IT sector during day, and in his free time he works on Kannada linguistic technology initiatives, FOSS via Sanchi Foundation and Sanchaya. He writes tech in Kannada on his blog and contributes to Wikipedia, Creative Commons, Mozilla etc.

Mukund Gowda is a native Bengalurean, a resident of Baiyappanahalli since birth. He works with KPMG for its Risk Consulting practice. He is a civic leader with B.PAC and founder of Nammuru Nammoru and Namma Baiyappanahalli.

Leave a Reply

Your email address will not be published. Required fields are marked *

Similar Story

Hoarding menace returns: A step backwards for Singara Chennai 2.0

With hoardings making a comeback in the city, how will the Greater Chennai Corporation ensure they do not become a hazard for citizens?

For those of us who rejoiced for long at the complete absence of large outdoor hoardings (billboards in American parlance) in Chennai, those days of happiness may be very limited. As per a recent news item, the Greater Chennai Corporation (GCC) has invited those interested in putting them up to apply via an online system connected to its website. The civic body has not elaborated on how it has overturned a decision taken by the party in power, both at the Corporation and state levels. And it has also not elaborated on how it proposes to prevent these from becoming…

Similar Story

Rainwater Harvesting explained: What, why and how much

Active resident participation, joint planning, and proper upkeep are essential for Rainwater Harvesting to provide lasting benefits to homes and communities.

With rapid urbanisation and increasing strain on public water supply systems, especially in cities like Bengaluru and Chennai, sustainable water management has become essential. Rainwater Harvesting (RWH) is one of the simplest and most effective methods to address water scarcity, reduce urban flooding, and restore groundwater levels. This guide provides a clear overview of what RWH is, why it matters, how it works, and what it costs. What is RWH? Rainwater Harvesting (RWH) refers to the practice of collecting and storing rainwater for use or directing it into the ground to replenish groundwater. This can be achieved through two main…