Translated by Mukund Gowda
ನಗರ ಭೂ ಸಾರಿಗೆ ನಿರ್ದೇಶನಾಲಯವು ಇತ್ತೀಚಿಗೆ ಬೆಂಗಳೂರು ಮಹಾನಗರದ ‘ಸಮಗ್ರ ಸಾರಿಗೆ ಯೋಜನೆಯ ಕರಡನ್ನು ತಯಾರಿಸಿದ್ದು ಇದರಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದ್ದ ಎಲಿವೇಟೆಡ್ ಕಾರಿಡಾರ್ ಯೋಜನೆಯೂ ಒಳಗೊಂಡಿದ್ದು ೯೨ ಕಿಲೋಮೀಟರ್ ನ ಈ ಎತ್ತರದ ಕಾರಿಡಾರ್ ನಿರ್ಮಾಣಕ್ಕೆ ಹದಿನೆಂಟು ಸಾವಿರ ಕೋಟಿಗೂ ಹೆಚ್ಚು ವ್ಯಯಿಸಲಾಗುವುದು ಎಂದು ಉಲ್ಲೇಖಿಸಿದೆ.
ಕೇಂದ್ರದ ಮೆಟ್ರೋ ಪೋಲಿಸಿಗೆ ಅನುಗುಣವಾಗಿ ಮೆಟ್ರೋಪಾಲಿಟನ್ ನಗರಕ್ಕೆ ‘ಸಮಗ್ರ ಸಾರಿಗೆ ಯೋಜನೆ‘ಯನ್ನು ತಯಾರಿಸಬೇಕಿದೆ.
ಈ ಯೋಜನೆಯ ಕರಡಿನಲ್ಲಿ ಏನೆಲ್ಲಾ ಇದೆ ಎಂದು ಇಲ್ಲಿ ಸಂಕ್ಷಿಪ್ತವಾಗಿ ಹೇಳುತ್ತೇವೆ :
ಮೆಟ್ರೋ, ಉಪನಗರ ರೈಲು, ಬಸ್ ಆದ್ಯತಾ ಪಥ ಮತ್ತು ಬಸ್ ಸಂಖ್ಯೆ ಹೆಚ್ಚಳವನ್ನು ಒಳಗೊಂಡಂತೆ ಮೂರು ಹಂತದಲ್ಲಿ ಸಮಗ್ರ ಸಾರಿಗೆ ವ್ಯವಸ್ಥೆ ಕಲ್ಪಿಸುವ ಯೋಜನೆಗಳು ಈ ಹಿಂದೆ 2011 ಮತ್ತು 2015ರ ಕರಡು ಯೋಜನೆಯಲ್ಲಿ ಪ್ರಸ್ತಾಪಿತವಾಗಿತ್ತು.
ಈ ಯೋಜನೆಯ ಹಳೆ ಮತ್ತು ಹೊಸ ಆವೃತ್ತಿಗಳ ಎರಡನೇ ಮತ್ತು ಮೂರನೇ ಹಂತದಲ್ಲಿ ನಗರ ಸಾರಿಗೆಯ ವಿವಿಧ ಆಯಾಮಗಳ ಬಗ್ಗೆ ಪ್ರಸ್ತಾಪಿಸಲಾಗಿದೆ. ಉದಾ: ಸಾರಿಗೆ ಆಧಾರಿತ ಅಭಿವೃದ್ಧಿ, ಮೆಟ್ರೊಲೈಟ್ ಯೋಜನೆ, ವಿವಿಧ ಸಾರಿಗೆಗೆ ಏಕ ಶುಲ್ಕ ವ್ಯವಸ್ಥೆ, ವಾಹನ ದಟ್ಟಣೆ ಶುಲ್ಕ, ಪೇ–ಅಂಡ್–ಪಾರ್ಕ್ ವ್ಯವಸ್ಥೆ ಇತ್ಯಾದಿ.
ಕೆಲವು ಪ್ರಮುಖ ಉದ್ದೇಶಿತ ಯೋಜನೆಗಳು:
ಸಾರಿಗೆ ಆಧಾರಿತ ಅಭಿವೃದ್ಧಿ: ಅಭಿವೃದ್ಧಿಯನು ಸಾರಿಗೆ ಸೌಲಭ್ಯ ಮತ್ತು ಯೋಜನೆಗಳ ಸುತ್ತ ಹೆಣೆಯುವುದರಿಂದ, ಕಾರ್ಮಿಕ ಮತ್ತು ಶ್ರಮಿಕ ಜನರಿಗೆ ಉನ್ನತ ಸಾರಿಗೆ ಸೌಕರ್ಯವು ಅತ್ಯಂತ ಸಹಕಾರಿಯಾಗುವುದು. ಜನವರಿಯಲ್ಲಿ ಸಾರ್ವಜನಿಕರ ಗಮನಕ್ಕೆ ತರಲಾದ ಸಾರಿಗೆ ಆಧಾರಿತ ಅಭಿವೃದ್ಧಿಯ ಕರಡು ಪಾಲಿಸಿಯ ಪ್ರಕಾರ ನಗರದಲ್ಲಿ 60% ಜನರು ಈ ಸಾರಿಗೆ ಯೋಜನೆಯ ವ್ಯಾಪ್ತಿಗೊಳಪಟ್ಟಿದ್ದು, 70% ಸಾರ್ವಜನಿಕ ಸಾರಿಗೆಯ ಮೂಲಕ ಜನರಿಗೆ ಸಾರಿಗೆ ಸೌಲಭ್ಯ ನೀಡಬಹುದೆಂದು ಉಲ್ಲೇಖಿಸಿದೆ. ಮೆಟ್ರೊಲೈಟ್ ಯೋಜನೆ : ಸಾಮಾನ್ಯ ಮೆಟ್ರೋ ರೈಲಿನ ಮೂರರ ಒಂದರಷ್ಟು ಜನರನ್ನು ಸಾಗಿಸಬಲ್ಲ ಮೆಟ್ರೋಲೈಟ್ ಯೋಜನೆಯ ಪ್ರತಿ ಕಿ.ಮೀ. ಗೆ ರೂ.180 ಕೋಟಿ ಬೇಕಿದೆ. ಆದರೆ, ಪೂರ್ಣ ಪ್ರಮಾಣದ ಒಂದು ಮೆಟ್ರೋ ರೈಲಿಗೆ ಬೇಕಿರುವುದು ರೂ. 300 ಕೋಟಿ. ಎಲ್ಲ ಸಾರಿಗೆ ವ್ಯವಸ್ಥೆಗೆ ಒಂದೇ ಶುಲ್ಕ ವ್ಯವಸ್ಥೆ : ಉದ್ದೇಶಿತ ಹೊಸ ‘ಸಮಗ್ರ ಸಾರಿಗೆ ಯೋಜನೆಯು‘ ಸಾರ್ವಜನಿಕ ಸಾರಿಗೆಯ ಅನುಕೊಲಕ್ಕೆ ಒಂದೆಡೆ ಶುಲ್ಕ ಸಂಗ್ರಹಿಸಿ ಜನರಿಗೆ ಅನುಕೂಲ ನೀಡಲು National Common Mobility ಕಾರ್ಡ್ ಅನ್ನು ನೀಡುವ ಮಹತ್ತರ ಉದ್ದೇಶವನ್ನು ಹೊಂದಿದೆ. ಇದರಿಂದ ಜನರು ಬೇರೆ ಬೇರೆ ಸಾರಿಗೆ ಸೌಲಭ್ಯ ಮತ್ತು ಪಾರ್ಕಿಂಗ್ ವ್ಯವಸ್ಥೆಯನ್ನು ಸುಲಭವಾಗಿ ಪಡೆಯಬಹುದಾಗಿದೆ. ದಟ್ಟಣೆ ಶುಲ್ಕ : ಬೆಂಗಳೂರಿನ ಕೇಂದ್ರ ಪ್ರದೇಶಗಳಲ್ಲಿ ಖಾಸಗಿ ವಾಹನ ಬಳಕೆಯನ್ನು ಕಡಿಮೆಗೊಳಿಸುವ ಸಲುವಾಗಿ ಜನ ಮತ್ತು ವಾಹನ ದಟ್ಟಣೆ ಹೆಚ್ಚಿರುವ ಸಮಯದಲ್ಲಿ ಹೆಚ್ಚುವರಿ ಶುಲ್ಕವನ್ನು ಖಾಸಗಿ ವಾಹನ ಸವಾರರಿಗೆ ವಿಧಿಸಲು ಉದ್ದೇಶಿಸಲಾಗಿದೆ. ಪೇ–ಅಂಡ್–ಪಾರ್ಕ್ : ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯು ನಿಗದಿತ ಪ್ರದೇಶಗಳಲ್ಲಿ ಪಾರ್ಕಿಂಗ್ ಶುಲ್ಕವನ್ನು ವಿಧಿಸುವ ಬಗ್ಗೆಯೂ ಈ ಯೋಜನೆಯಲ್ಲಿ ಪ್ರಸ್ತಾಪಿಸಲಾಗಿದೆ. |
ಸಾರಿಗೆ ಅಭಿವೃದ್ಧಿ ಯೋಜನೆಗಳನ್ನು ಜಾರಿಗೊಳಿಸುವ ಹಿಂದಿನ ಪ್ರಯತ್ನಗಳು
ಈ ಹಿಂದೆಯೂ ಸರ್ಕಾರವು ‘ಬೆಂಗಳೂರು ನಗರ ಸಮಗ್ರ ಸಂಚಾರ ಮತ್ತು ಸಾರಿಗೆ ಯೋಜನೆ (2001)’ ಮತ್ತು ‘ಬೆಂಗಳೂರು ಮಹಾನಗರ ಪ್ರದೇಶ ಸಮಗ್ರ ಸಂಚಾರ ಮತ್ತು ಸಾರಿಗೆ ಅಧ್ಯಯನ (2015)’ ಅನ್ನು ಜಾರಿಗೆ ತಂದಿತ್ತು.
2011ರ ವರದಿಯು ಬಸ್ ಕ್ಷಿಪ್ರ ಸಾರಿಗೆ ವ್ಯವಸ್ಥೆ (BRTS), ಉಪನಗರ ರೈಲು ಯೋಜನೆ ಮತ್ತು ಸಾರ್ವಜನಿಕ ಸಾರಿಗೆ ವ್ಯವಸ್ಥೆಯ ಉದ್ದಗಲಕ್ಕೂ ಕಾರಿಡಾರ್‌ಗಳ ಸಾಂದ್ರತೆಯ ಬಗ್ಗೆ ಮಾತನಾಡಿದರೆ, 2015 ರ ಯೋಜನೆಯು 341 ಕಿ.ಮೀ. ಉದ್ದದ ಸಾಮೂಹಿಕ ಸಾರಿಗೆ ಕಾರಿಡಾರ್‌ಗಳು, 231 ಕಿ.ಮೀ. ಉದ್ದದ BRTS ಮತ್ತು ಇಂಟೆರ್ ಮೋಡಲ್ ನಿಲ್ದಾಣಗಳ ಮೇಲೆ ಒತ್ತು ನೀಡಿದೆ.
ಈ ರೀತಿಯ ಬಹುತೇಕ ಪ್ರಸ್ತಾವನೆಗಳು ಇನ್ನೂ ಜಾರಿಗೊಳ್ಳದೆ ಕೇವಲ ಹಾಳೆಯ ಮೇಲೆ ಉಳಿದಿದೆ. ಉದಾಹರಣೆಗೆ : ಹೊರವರ್ತುಲ ರಸ್ತೆಯಲ್ಲಿ ಸಿಲ್ಕ್ ಬೋರ್ಡ್ ಜಂಕ್ಷನ್ ನಿಂದ ಕೆ.ಅರ.ಪುರಂ ವರೆಗೂ ನಿರ್ಮಿಸಲು ಉದ್ದೇಶಿಸಿದ್ದ BRTS ಅನ್ನು ಮೆಟ್ರೋ ರೈಲಿಗೋಸ್ಕರ ಬಲಿ ಕೊಡಲಾಯಿತು. ಸದ್ಯ ಈ ರಸ್ತೆಯಲ್ಲಿ ಬಸ್ ಆದ್ಯತಾ ಪಥ ಚಾಲ್ತಿಯಲ್ಲಿದೆ.
ಯೋಜನಾ ವೆಚ್ಚ ಮತ್ತು ಕಾಲಮಿತಿ
ಕನ್ಸಲ್ಟಿಂಗ್ ಕಂಪೆನಿಯಾದ ಇನ್ಫ್ರಾಸ್ಟ್ರಕ್ಚರ್ ಡೆವಲಪ್ಮೆಂಟ್ ಕಾರ್ಪೋರೇಶನ್ ಕರ್ನಾಟಕ (iDeCK) ತಯಾರಿಸಿರುವ ಹೊಸ ಕ್ರಿಯಾ ಯೋಜನೆಯಲ್ಲಿ ಮುಂದಿನ ಹದಿನೈದು ವರ್ಷದಲ್ಲಿ ಸರ್ಕಾರವು ಕೈಗೊಳ್ಳುವ ಯೋಜನೆಗಳ ಬಗ್ಗೆ ಪ್ರಸ್ತಾಪಿಸಲಾಗಿದೆ.
ಜನವರಿ 20ರೊಳಗೆ ನಿಮ್ಮ ಅನಿಸಿಕೆ
ಉದ್ದೇಶಿತ ‘ಸಮಗ್ರ ಸಾರಿಗೆ ಯೋಜನೆ 2019’ ರ ಕರಡನ್ನು ಸಾರ್ವಜನಿಕರ ಗಮನಕ್ಕೆ ತಂದು ಅಭಿಪ್ರಾಯ ಸಂಗ್ರಹಿಸಲು ಸರ್ಕಾರ ಮುಂದಾಗಿದೆ. 226 ಪುಟಗಳ ಈ ಕಡತವು ನಗರ ಭೂ ಸಾರಿಗೆ ನಿರ್ದೇಶನಾಲಯದ ಮತ್ತು ಬೆಂಗಳೂರು ಮೆಟ್ರೋ ನಿಗಮದ ವೆಬ್ ಸೈಟ್ ನಲ್ಲಿ ಲಭ್ಯವಿದೆ. ಈ ಕಡತವನ್ನು ವೀಕ್ಷಿಸಲು ಇಲ್ಲಿ ಕ್ಲಿಕ್ ಮಾಡಿ. *ಸಾರ್ವಜನಿಕ ಅಭಿಪ್ರಾಯ ಸಂಗ್ರಹದ ಕಾಲಮಿತಿಯನ್ನು ವಿಸ್ತರಿಸಿ ಜನವರಿ 20 ರವರೆಗೆ ಅಭಿಪ್ರಾಯ ನೀಡಲು ಅವಕಾಶ ಕಲ್ಪಿಸಲಾಗಿದೆ. |
ಸರ್ಕಾರವು ಪ್ರಸ್ತುತ ಯೋಜನೆಯ ವಿತ್ತ ಸಂಗ್ರಹಣೆಗೆ ಆರು ಮಾರ್ಗಗಳನ್ನು ಸೂಚಿಸಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರದ ಆಯವ್ಯಯದಲ್ಲಿ ಅನುದಾನ ನೀಡುವುದು, ಪಾರ್ಕಿಂಗ್ ಶುಲ್ಕ ಸಂಗ್ರಹಣೆ, ಸಂಚಾರ ದಟ್ಟಣೆ ಶುಲ್ಕ ಸಂಗ್ರಹಣೆ, ಸಾರ್ವಜನಿಕ – ಖಾಸಗಿ ಸಹಭಾಗಿತ್ವ ಇತ್ಯಾದಿ. ಈ ಯೋಜನೆಯಲ್ಲಿ ‘ಬೆಂಗಳೂರು ಸಂಚಾರ ನಿರ್ವಹಣಾ ಪ್ರಾಧಿಕಾರ’ ಸಂಸ್ಥೆಯನ್ನು ಶಾಸನಬದ್ದವಾಗಿ ತೆರೆಯಲು ಪ್ರಸ್ತಾಪಿಸಲಾಗಿದೆ.
ಈ ಯೋಜನೆಯ ಮೊದಲ ಹಂತವನ್ನು 2020 – 2022 ರೊಳಗೆ ರೂ 35,835 ಕೋಟಿ ವೆಚ್ಚದಲ್ಲಿ ಜಾರಿಗೆ ತರಲು ಉದ್ದೇಶಿಸಲಾಗಿದೆ. ರೂ 69,110 ಕೋಟಿ ವೆಚ್ಚದ ಎರಡನೇ ಹಂತವನ್ನು 2023 ರಿಂದ 2027 ರೊಳಗೆ ಜಾರಿಗೊಳಿಸಲು ಉದ್ದೇಶಿಸಲಾಗಿದೆ. ಇದಾದ ನಂತರ 2028 – 2035 ರಲ್ಲಿ ಬರೋಬ್ಬರಿ 1.25 ಲಕ್ಷ ಕೋಟಿ ವೆಚ್ಚದಲ್ಲಿ ಮೂರನೇ ಹಂತವನ್ನು ಜಾರಿಗೊಳಿಸಲಾಗುತ್ತದೆ.
ವಿವಿಧ ಸಾರಿಗೆ ಯೋಜನೆಗಳ ಪ್ರಸ್ತುತ ಸ್ಥಿತಿ ಏನು?
ಮೆಟ್ರೋ:
ಈಗಾಗಲೇ 42.3 ಕಿ.ಮೀ ಉದ್ದದ ಮಾರ್ಗದಲ್ಲಿ ಮೆಟ್ರೋ ಚಲಿಸುತ್ತಿದ್ದು, ಅದರ ಎರಡನೇ ಹಂತವು ಪ್ರಗತಿಯಲ್ಲಿದೆ. ವೈಟ್‌ಫೀಲ್ಡ್‌ನಿಂದ ಬೈಯಪ್ಪನಹಳ್ಳಿ, ಮೈಸೂರು ರಸ್ತೆಯಿಂದ ಪಟ್ಟನಗರೆ, ಯಲಚೇನಹಳ್ಳಿಯಿಂದ ಕನಕಪುರ ರಸ್ತೆಯ ಅಂಜನಾಪುರ, ಎಲೆಕ್ಟ್ರಾನಿಕ್ಸ್ ಸಿಟಿ ಲೈನ್, ನಾಗಸಂದ್ರದಿಂದ ಬೆಂಗಳೂರು ಅಂತರರಾಷ್ಟ್ರೀಯ ಪ್ರದರ್ಶನ ಕೇಂದ್ರ ಮತ್ತು ಗೊಟ್ಟಿಗರೆ-ನಾಗವಾರ ಮಾರ್ಗಗಳು ಇದರಲ್ಲಿ ಸೇರಿವೆ.
ಬಿಎಂಆರ್ಸಿಎಲ್ ಕೆಆರ್ ಪುರಂ – ಬೆಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದ(35 ಕಿಮೀ) ಪ್ರಸ್ತಾವನೆಯನ್ನು ಹಂತ -3 ರಿಂದ ಹಂತ 2 (ಬಿ) ಗೆ ಬದಲಿಸಿತ್ತು. ಅದೇ ರೀತಿ 18 ಕಿ.ಮೀ ಉದ್ದದ ಕೆ.ಆರ್.ಪುರಂನಿಂದ ಸಿಲ್ಕ್ ಬೋರ್ಡ್ ಮಾರ್ಗವನ್ನು 3 ನೇ ಹಂತದಿಂದ 2 ನೇ ಹಂತಕ್ಕೆ (ಎ) ವರ್ಗಾಯಿಸಿತು. ಆದಾಗ್ಯೂ, ಈ ಎರಡು ಮಾರ್ಗಗಳ ನಿರ್ಮಾಣಕ್ಕಾಗಿ ಇನ್ನು ಟೆಂಡರ್ ಕರೆಯಲಾಗಿಲ್ಲ. ಮೆಟ್ರೋ ಜಾಲವನ್ನು 100 ಕಿ.ಮೀ ಗೂ ಮೀರಿ ಹೆಚ್ಚಿಸಲು ಉದ್ದೇಶಿಸಿರುವ ಮೂರನೇ ಹಂತವು ಇನ್ನು ಯೋಜನಾ ಹಂತದಲ್ಲಿದೆ.
ಉಪನಗರ ರೈಲು:
18,000 ಕೋಟಿ ರೂ.ಗಳ ಉಪನಗರ ರೈಲು ಯೋಜನೆಯನ್ನು ರಾಜ್ಯ ಸರ್ಕಾರ (ಈ ವರ್ಷದ ಆರಂಭದಲ್ಲಿ) ಮತ್ತು ರೈಲ್ವೆ ಮಂಡಳಿ (ಇತ್ತೀಚೆಗೆ) ಜಾರಿಗೊಳಿಸಲು ಮುಂದಾಗಿದೆ.
ಬಸ್ ಆದ್ಯತಾ ಪಥ:
ಸಿಲ್ಕ್ ಬೋರ್ಡ್ ಜಂಕ್ಷನ್‌ನಿಂದ ಕೆ.ಆರ್.ಪುರಂವರೆಗಿನ ಹೊರ ವರ್ತುಲ ರಸ್ತೆಯಲ್ಲಿ 18 ಕಿ.ಮೀ ಉದ್ದದ ಮೊದಲ ಬಸ್ ಆದ್ಯತೆಯ ಲೇನ್ ಇತ್ತೀಚೆಗೆ ಪ್ರಾರಂಭವಾಯಿತು.
ಫೆರಿಫೆರಲ್ ರಿಂಗ್ ರಸ್ತೆ:
ಬಹುನಿರೀಕ್ಷಿತ ಈ ಯೋಜನೆಗೆ ರಾಜ್ಯ ಸರ್ಕಾರ ತನ್ನ 2019-20ರ ಬಜೆಟ್‌ನಲ್ಲಿ 1000 ಕೋಟಿ ರೂ ನಿಗದಿಪಡಿಸಿದೆ. ಈ ಯೋಜನೆಗೆ ಸುಮಾರು 800 ಎಕರೆ ಭೂಮಿ ಅಗತ್ಯವಿದ್ದರೂ, ಸ್ವಾಧೀನ ಪ್ರಕ್ರಿಯೆ ಇನ್ನೂ ಪ್ರಾರಂಭವಾಗಿಲ್ಲ. ಸ್ವಾಧೀನಕ್ಕಾಗಿ ಆರಂಭಿಕ ಸಮೀಕ್ಷೆಗಳು ನಡೆಯುತ್ತಿವೆ.
ಸಮಗ್ರ ಸಾರಿಗೆ ಯೋಜನೆಯ ಪ್ರಮುಖ ಆಯಾಮಗಳಿಗೆ ಹಣ ಹಂಚಿಕೆ ಹೀಗಿದೆ
- ಒಂದನೇ ಹಂತ
ಮೆಟ್ರೋ ರೈಲು: 58 ಕಿ.ಮೀ. | ₹ 15,950 |
ರಸ್ತೆಗಳ ಅಗಲೀಕರಣ : 50 ಕಿ.ಮೀ. | ₹ 5,000 |
ಉಪನಗರ ರೈಲು – ಮೀಸಲು ಟ್ರ್ಯಾಕ್: 25 ಕಿ.ಮೀ. | ₹ 3,450 |
ಪೆರಿಫೆರಲ್ ರಿಂಗ್ ರಸ್ತೆ (PRR): 20 ಕಿ.ಮೀ. | ₹ 3,080 |
ಬಸ್ ಸಂಖ್ಯೆ ಹೆಚ್ಚಳ : 2000 nos | ₹ 3,000 |
ಪ್ರಮುಖ ಜಂಕ್ಷನ್ / ವಿಭಾಗಗಳ ಸಾಮರ್ಥ್ಯ ವೃದ್ಧಿ: 3 ಸಂಖ್ಯೆ | ₹ 1,800 |
- ಎರಡನೇ ಹಂತ
ಸಾರಿಗೆ ಆಧಾರಿತ ಅಭಿವೃದ್ಧಿ: 160 ಕಿ.ಮೀ. | ₹16,000 |
ಉಪನಗರ ರೈಲು – ಮೀಸಲು ಟ್ರ್ಯಾಕ್: 62 km | ₹8,556 |
ಮೆಟ್ರೋ ರೈಲು: 30 ಕಿ.ಮೀ | ₹8,250 |
ರಸ್ತೆಗಳ ಅಗಲೀಕರಣ : 70 ಕಿ.ಮೀ | ₹7,000 |
ಬಸ್ ಸಂಖ್ಯೆ ಹೆಚ್ಚಳ: 3500 nos | ₹5,250 |
ಎತ್ತರದ ಕಾರಿಡಾರ್ (EW-01): 25 km | ₹5,250 |
ಪೆರಿಫೆರಲ್ ರಿಂಗ್ ರಸ್ತೆ (PRR): 25 ಕಿ.ಮೀ | ₹3,850 |
ಎತ್ತರದ ಮೆಟ್ರೊಲೈಟ್ : 13 ಕಿ.ಮೀ | ₹2,340 |
ಕಾರಿಡಾರ್ ಸುಧಾರಣೆಗಳು: 54 ಕಿ.ಮೀ. | ₹1,620 |
ಬಸ್ ಡಿಪೋಗಳು / ಟರ್ಮಿನಲ್ ಗಳು : 40 ಸಂಖ್ಯೆ | ₹1,600 |
ಡಿಪೋಗಳು / ಟರ್ಮಿನಲ್ ಗಳು: 20 ಸಂಖ್ಯೆ | ₹1,600 |
ಪಾರ್ಕಿಂಗ್ ಮೂಲಸೌಕರ್ಯ: 30 ಸಂಖ್ಯೆ | ₹1,500 |
ಇಂಟರ್ಮೋಡಲ್ ಟ್ರಾನ್ಸಿಟ್ ಹಬ್ಸ್: 15 ಸಂಖ್ಯೆ | ₹1,125 |
- ಮೂರನೇ ಹಂತ
ಸಾರಿಗೆ ಆಧಾರಿತ ಅಭಿವೃದ್ಧಿ: 320 ಕಿ.ಮೀ. | ₹32,000 |
ಮೆಟ್ರೋ (ಭೂಗತ): 34 ಕಿ.ಮೀ. | ₹20,400 |
ಎತ್ತರದ ಕಾರಿಡಾರ್: 63 ಕಿ.ಮೀ. | ₹13,230 |
ಮೆಟ್ರೊಲೈಟ್ (ಎತ್ತರಿಸಿದ) / ಎಂಆರ್‌ಟಿ: 68 ಕಿ.ಮೀ | ₹12,240 |
ಐಪಿಟಿ ವಾಹನಗಳು ಮತ್ತು ಸಾರ್ವಜನಿಕ ಸಾರಿಗೆ ಬಸ್‌ಗಳಿಗೆ ಕ್ರಮವಾಗಿ ಸಿಎನ್‌ಜಿ ಮತ್ತು ವಿದ್ಯುತ್ ಅಳವಡಿಕೆ: 6500 ಸಂಖ್ಯೆ | ₹9,750 |
ಉಪನಗರ ರೈಲು – ಮೀಸಲು ಟ್ರ್ಯಾಕ್: 62 km | ₹8,556 |
ರಸ್ತೆಗಳ ಅಗಲೀಕರಣ : 72 ಕಿ.ಮೀ | ₹7,200 |
BRTS: 107 ಕಿ.ಮೀ | ₹5,350 |
ಪೆರಿಫೆರಲ್ ರಿಂಗ್ ರಸ್ತೆ (PRR): 33 ಕಿ.ಮೀ | ₹5,082 |
ಬಸ್ ಸಂಖ್ಯೆ ಹೆಚ್ಚಳ: 3000 nos | ₹4,500 |
ಡಿಪೋಗಳು / ಟರ್ಮಿನಲ್ ಗಳು: 65 ಸಂಖ್ಯೆ | ₹2,600 |
ಇಂಟರ್ಮೋಡಲ್ ಟ್ರಾನ್ಸಿಟ್ ಹಬ್ಸ್: 15 ಸಂಖ್ಯೆ | ₹1,125 |
Read the original in English here.
About our volunteer translator
Mukund Gowda is a native Bengalurean, a resident of Baiyappanahalli since birth. He works with KPMG for its Risk Consulting practice. He is a civic leader with B.PAC and founder of Nammuru Nammoru and Namma Baiyappanahalli.