Translated by Mukund Gowda
ಅನೇಕ ವರ್ಷಗಳಿಂದ ಸಿಲ್ಕ್ ಬೋರ್ಡ್ ಮತ್ತು ಕೆ.ಆರ್.ಪುರಂ ಮಧ್ಯೆ ಬಿಎಂಟಿಸಿ ಬಸ್ ಚಾಲನೆ ಮಾಡುತ್ತಿರುವ ರಾಮು ಬಿ.ಪಿ ಅವರಿಗೆ ಕಳೆದ ನವೆಂಬರ್ 1 ರಿಂದ ಜಾರಿಯಾದ ಬಸ್ ಆದ್ಯತೆ ಪಥ ನಿರಾಳತೆ ನೀಡಿದೆ. “ಮೊದಲೆಲ್ಲಾ ಈ ಮಾರ್ಗ ಮಧ್ಯದ ಸಂಚಾರಕ್ಕೆ 75 ನಿಮಿಷ ಬೇಕಿತ್ತು , ಕಳೆದ ಮೂರು ತಿಂಗಳಲ್ಲಿ ಇದು 45-50 ನಿಮಿಷಕ್ಕೆ ಇಳಿದಿದೆ.” ಎಂದು ಹೇಳುವ ಇವರು “ಬಸ್ ಆದ್ಯತೆ ಪಥ ಸಂಪೂರ್ಣವಾಗಿ ಜಾರಿಯಾದರೆ, ಇನ್ನಷ್ಟು ಸಮಯ ಉಳಿಯುವುದು” ಎಂದು ಅಭಿಪ್ರಾಯ ಪಟ್ಟಿದ್ದಾರೆ.
ಇದೇ ಮಾರ್ಗದಲ್ಲಿ ಬಸ್ ಚಲಾಯಿಸುವ ಇನ್ನೊಬ್ಬ ಚಾಲಕ ಸಂಜಪ್ಪ ಅವರಿಗೆ ಬಸ್ ಆದ್ಯತೆ ಪಥ ಮಾನಸಿಕ ನೆಮ್ಮದಿ ನೀಡಿದೆ. “ಮೊದಲೆಲ್ಲಾ ಜನರು ಬೇಜವಾಬ್ದಾರಿಯಿಂದ ಅಪಾಯಕಾರಿಯಾಗಿ ವಾಹನ ಓಡಿಸುವುದರಿಂದ ಹೆಚ್ಚು ಒತ್ತಡ ಇತ್ತು, ಇದೀಗ ನಮಗೆಂದೇ ಪ್ರತ್ಯೇಕ ಪಥ ಇರುವುದರಿಂದ ಬಸ್ ಚಲಾಯಿಸುವುದು ಸುಲಭವಾಗಿದೆ” ಎನ್ನುತ್ತಾರೆ.
ಸಾರ್ವಜನಿಕ ಸಾರಿಗೆಗೆ ಪ್ರತ್ಯೇಕ ಪಥ ನೀಡಿರುವುದಕ್ಕೆ ಸಂತಸ ವ್ಯಕ್ತಪಡಿಸುತ್ತಾ, ಎಲ್ಲಾ ವಾಹನ ಸವಾರರು ಇದರ ಉದ್ದೇಶವನ್ನು ಗೌರವಿಸುತ್ತಿಲ್ಲ ಎಂದು ಸಂಜಪ್ಪ ಅವರು ಬೇಸರ ವ್ಯಕ್ತ ಪಡಿಸುತ್ತಾರೆ. “ಈ ವಿಷಯದಲ್ಲಿ ಸಾರ್ವಜನಿಕರಿಂದ ಸಂಪೂರ್ಣ ಸಹಕಾರ ದೊರಕದಿದ್ದರೂ, ಆದ್ಯತೆ ಪಥವು ನಮಗೆ ಮಾನಸಿಕ ನೆಮ್ಮದಿ ನೀಡಿದೆ, ಸಂಚಾರ ಸಮಯ ತಗ್ಗಿಸಿದೆ ಮತ್ತು ಪ್ರಯಾಣಿಕರ ಸಂಖ್ಯೆ ಹೆಚ್ಚಿಸಿದೆ” ಎನ್ನುತ್ತಾರೆ.
ಬಿಎಂಟಿಸಿ ಯ ಸಂಚಾರ ವಿಭಾಗದ ಮುಖ್ಯ ವ್ಯವಸ್ಥಾಪಕರಾದ ರಾಜೇಶ್ ರವರ ಪ್ರಕಾರ ಈ ಯೋಜನೆಯಿಂದ ಸಂಸ್ಥೆಗೆ ಅಪಾರ ಅನುಕೂಲವಾಗಿದ್ದು, ಮಾರ್ಗದಲ್ಲಿ ಸಂಚರಿಸುವವರ ಸಂಖ್ಯೆಯು ಸರಾಸರಿ 3,727 ರಷ್ಟು ಹೆಚ್ಚಿದೆ. “ಈ ಮಾರ್ಗದಲ್ಲಿ ನಾವು ಓಡಿಸುವ 837 ಬಸ್ ಗಳಲ್ಲಿ ಸರಾಸರಿ 88,000 ಪ್ರಯಾಣಿಕರು ಸಂಚರಿಸುತ್ತಾರೆ” ಎನ್ನುತ್ತಾರೆ.
“ಮೊದಲು ಕೆ ಆರ್ ಪುರಂ ಮತ್ತು ಸಿಲ್ಕ್ ಬೋರ್ಡ್ ನಡುವೆ ಸಂಚರಿಸಲು ಸುಮಾರು 80 ನಿಮಿಷ ಬೇಕಾಗಿತ್ತು, ಆದರೆ ಈಗ 65 ನಿಮಿಷ ತಗುಲುತ್ತಿದೆ. ಇದರಿಂದ 15 ನಿಮಿಷಗಳ ಉಳಿತಾಯವಾಗುತ್ತಿದೆ” ಎಂದು ಪ್ರಯಾಣದ ವೇಳೆಯ ಬಗ್ಗೆ ಮಾತನಾಡುತ್ತಾ ರಾಜೇಶ್ ಹೇಳಿದರು.
ಈ ಅಧಿಕಾರಿಯ ಪ್ರಕಾರ ಬಿಬಿಎಂಪಿಯು ಬಸ್ ಆದ್ಯತೆ ಪಥಕ್ಕೆ ಬೇಕಾಗುವ ಮೂಲ ಸೌಕರ್ಯ ಒದಗಿಸಿದರೆ ಇನ್ನೂ 15 ನಿಮಿಷ ಉಳಿಸಬಹುದು.
ಮತ್ತೊಬ್ಬ ಚಾಲಕರಾದ ಶರಣು ರವರ ಪ್ರಕಾರ ಬೋಲ್ಲಾರ್ಡ್ ಗಳನ್ನು ಅಳವಡಿಸುವುದರಿಂದ ಬಸ್ ಗಳು ಇನ್ನಷ್ಟು ವೇಗವಾಗಿ ಚಲಿಸಬಹುದು ಮತ್ತು ಇದರ ಬಗ್ಗೆ ಅಧಿಕಾರಿಗಳು ಗಮನ ಹರಿಸಬೇಕು.
ಅತ್ಯಂತ ಹೆಚ್ಚು ಸಂಚಾರ ದಟ್ಟಣೆ ಇರುವ ಈ 22 ಕಿ.ಮಿ ಉದ್ದದ ಮಾರ್ಗದಲ್ಲಿ ಎರಡು ವಿಷಯಗಳು ನಿಚ್ಚಳ
- ಎಲ್ಲಾ ರಸ್ತೆ ಬಳಕೆದಾರರಿಗೆ ಇದರ ಬಗ್ಗೆ ಗೊತ್ತಿಲ್ಲ
- ಪ್ರಸ್ತುತ ಕಾನೂನು ಸಮಗ್ರವಾಗಿ ಜಾರಿಯಾಗಿಲ್ಲ.
ಬಿಬಿಎಂಪಿಯು ಮಾರ್ಷಲ್ ಗಳನ್ನು ನಿಯೋಜಿಸಿದ್ದೇವೆ ಎಂದರೂ ಈ ಕಾನೂನು ಸರಿಯಾಗಿ ಜಾರಿಯಾಗಿಲ್ಲ. ಆದ್ದರಿಂದ ಖಾಸಗಿ ವಾಹನಗಳು ರಸ್ತೆ ದಟ್ಟಣೆ ಹೆಚ್ಚಾದಂತೆ ಈ ಬಸ್ ಆದ್ಯತೆ ಪಥದೊಳಗೆ ನುಸುಳುವುದುಂಟು.
ಆಶ್ಚರ್ಯವೆಂಬಂತೆ ಇದೇ ಮಾರ್ಗದಲ್ಲಿನ ಆಟೋ ರಿಕ್ಷಾ ಪ್ರಯಾಣ 56 ನಿಮಿಷ ತೆಗೆದುಕೊಂಡಿತು.
ಮಾರತ್ ಹಳ್ಳಿ ನಿವಾಸಿಯಾಗಿ ಬಸ್ ಪ್ರಯಾಣಿಕರ ವೇದಿಕೆಯ ಸದಸ್ಯರಾದ ಶಾಹೀನ್ ಶಾಸಾ ಪ್ರಕಾರ ನಿಯಮ ಸರಿಯಾಗಿ ಜಾರಿಯಾಗದ ಹೊರತು ಬಸ್ ಆದ್ಯತೆ ಪಥದ ಸಂಪೂರ್ಣ ಉಪಯೋಗ ತಿಳಿಯುವುದಿಲ್ಲ. ” ಇದರ ನಿಮಿತ್ತ ಕೆಲವೇ ದೂರುಗಳು ದಾಖಲಾಗಿದ್ದು, ಜಾರಿಗೊಳಿಸುವುದೇ ದೊಡ್ಡ ಸಮಸ್ಯೆಯಾಗಿದೆ. ಪೋಲಿಸರು ಇಲ್ಲದಿದ್ದರೂ ಈ ಯೋಜನೆಯ ಬಗ್ಗೆ ತಿಳುವಳಿಕೆ ಇರುವವರು ಮತ್ತು ಈ ಉದ್ದೇಶವನ್ನು ಗೌರವಿಸುವವರು ಕಾಲಕ್ರಮೇಣ ಈ ನಿಯಮ ಮುರಿಯುವುದನ್ನು ನಿಲ್ಲಿಸುತ್ತಾರೆ” ಎನ್ನುತ್ತಾರೆ.
ಬಿಬಿಎಂಪಿ ಯು ಈ ಯೋಜನೆಗೆ 15 ಕೋಟಿ ರೂಗಳನ್ನು ಖರ್ಚು ಮಾಡುತ್ತಿದೆ. ಪ್ರತಿ ಕಿ.ಮಿ ಗೆ 65 ಲಕ್ಷದಂತೆ ಕೆ.ಆರ್ ಪುರಂ ಮತ್ತು ಸಿಲ್ಕ ಬೋರ್ಡ್ ಮಾರ್ಗ ಮಧ್ಯೆ ಒಂದು ಮೀಟರ್ ಗೆ ಒಂದರಂತೆ 22 ಕಿ.ಮೀ ರಸ್ತೆಯಲ್ಲಿ ಸುಮಾರು 44,000 ಬೊಲ್ಲಾರ್ಡ್ ಗಳನ್ನು ಅಳವಡಿಸಲು ಯೋಜನೆ ರೂಪಿಸಲಾಗಿದೆ.
ನಗರಾಭಿವೃದ್ಧಿ ಇಲಾಖೆಯ ಅನುಮೋದನೆ ನಂತರ ಬೋಲ್ಲಾರ್ಡ್ ಗಳನ್ನು ಅಳವಡಿಸುವ ಬಿಬಿಎಂಪಿಯು ಈಗಾಗಾಲೇ ಲೇನ್ ಗುರುತಿಸಿ ಅದರ ಮೇಲೆ ಕಾಂಕ್ರೀಟ್ ಸ್ಟಾಂಪಿಂಗ್ ಮುಗಿಸಿದೆ. ಇದರೊಂದಿಗೆ ರಫ್ಲೆಕ್ಟರ್ ಗಳನ್ನು ಈಗಾಗಲೇ ಅಳವಡಿಸಿದೆ.
ಸರ್ವಿಸ್ ರಸ್ತೆಯಿಂದ ಒಳಬರುವ ವಾಹನಗಳನ್ನು ತಡೆಯಲು ಕ್ರಮಬದ್ಧವಾಗಿ ಬ್ಯಾರಿಕೇಡ್ ಗಳನ್ನು ಅಳವಡಿಸಲು ಬಿಬಿಎಂಪಿ ಯೋಜನೆ ರೂಪಿಸಿದ್ದು, ನಿಗದಿತ ಸ್ಥಳಗಳಲ್ಲಿ ಸರ್ವಿಸ್ ರಸ್ತೆಯಿಂದ ಒಳ ಬರಲು ಅನುಮತಿ ನೀಡಲಾಗುತ್ತದೆ ಎಂದು ತಿಳಿಸಿದೆ.
ಇನ್ನೂ ಮೂರು ರಸ್ತೆಗಳಲ್ಲಿ ಬಸ್ ಆದ್ಯತಾ ಪಥಗಳು
ಇದನ್ನು ಇನ್ನೂ ಮೂರು ರಸ್ತೆಗಳಲ್ಲಿ ಅಳವಡಿಸುವ ಮೂಲಕ ನಗರದ ಬಸ್ ಆದ್ಯತೆ ಪಥದ ಉದ್ದವನ್ನು 30 ಕಿ.ಮೀ ಗೆ ವಿಸ್ತರಿಸಲಾಗುವುದು. ಕೆ.ಆರ್.ಪುರಂ – ಹೆಬ್ಬಾಳದ 8.5ಕಿ.ಮೀ, ಸಿಲ್ಕ್ ಬೋರ್ಡ್ – ಎಲೆಕ್ಟ್ರಾನಿಕ್ ಸಿಟಿ ನಡುವೆ 10ಕಿ.ಮೀ ಹಾಗೂ ನಾಯಂಡಹಳ್ಳಿ – ತುಮಕೂರು ನಡುವೆ 12ಕಿ.ಮೀ ಉದ್ದದ ಆದ್ಯತೆ ಪಥಗಳನ್ನು ಅಭಿವೃದ್ಧಿ ಪಡಿಸಲು ಪಾಲಿಕೆಯು 19.5 ಕೋಟಿ ರೂಗಳ ಬೇಡಿಕೆ ಇಟ್ಟಿದೆ.” ಪಾಲಿಕೆಯ ಸೂಪರಿಂಟೆಂಡೆಂಟ್ ಇಂಜಿನಿಯರ್ (ರಸ್ತೆ ಮೂಲಸೌಕರ್ಯ) ಬಸವರಾಜ ಕಬಡೆ ರವರು ಹೇಳುವಂತೆ “ಇತ್ತೀಚಿಗೆ ನಡೆದ ಚರ್ಚೆಯಲ್ಲಿ ಬಿಎಂಟಿಸಿಯು ಸಂಚಾರ ದಟ್ಟಣೆ ಹೆಚ್ಚುರುವ ಇನ್ನೂ ಮೂರು ರಸ್ತೆಗಳಲ್ಲಿ ಆದ್ಯತೆ ಪಥ ಅಭಿವೃದ್ಧಿ ಪಡಿಸುವಂತೆ ಕೇಳಿದ್ದಾರೆ. ಸಿಲ್ಕ್ ಬೋರ್ಡ್ ಮತ್ತು ಎಲೆಕ್ಟ್ರಾನಿಕ್ ಸಿಟಿ ನಡುವಿನ ರಸ್ತೆ ರಾಷ್ಟ್ರೀಯ ಹೆದ್ದಾರಿ ಇಲಾಖೆಯಡಿ ಬಂದರೂ ನಾವು ಅದನ್ನು ಕೈಗೆತ್ತಿಕೊಳ್ಳುತ್ತೇವೆ. ಇದಕ್ಕೆಲ್ಲಾ ಇನ್ನೂ ವಿಸ್ತೃತ ವರದಿ ತಯಾರಾಗಬೇಕಿದೆ”. |
ನಿಯಮಗಳನ್ನು ಜಾರಿಗೊಳಿಸುವಲ್ಲಿ ವಿಫಲರಾದರೆ ಬಸ್ ಆದ್ಯತೆ ಪಥದ ಮೂಲ ಉದ್ದೇಶಕ್ಕೇ ಘಾಸಿಯಾಗುತ್ತದೆ
ಎಂಬ ಆತಂಕವನ್ನು ಪಾಲಿಕೆ ಆಯುಕ್ತ ಅನಿಲ್ ಕುಮಾರ್ ವ್ಯಕ್ತಪಡಿಸಿದ್ದಾರೆ. ” ಟ್ರಾಫಿಕ್ ನಿಯಮ ಜಾರಿಗೊಳಿಸುವ ಜವಾಬ್ದಾರಿ ನಮ್ಮದಲ್ಲದಿದ್ದರೂ, ತಾತ್ಕಾಲಿಕವಾಗಿ ಆದ್ಯತೆ ಪಥದುದ್ದಕ್ಕೂ ಮಾರ್ಷಲ್ ಗಳನ್ನು ನಿಯೋಜಿಸಿದ್ದೇವೆ. ಇದನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸಲು ಸಂಚಾರ ಪೋಲಿಸರು ಕೆಲಸ ಮಾಡಬೇಕಿದೆ”.
ಸಂಚಾರ ಪೋಲಿಸ್ ವಿಭಾಗದ ಮುಖ್ಯಸ್ಥರಾದ ರವಿಕಾಂತೇ ಗೌಡರು “ಹೌದು, ಈ ನಿಯಮಗಳನ್ನು ನಾವೇ ಜಾರಿಗೊಳಿಸಬೇಕು. ಇದನ್ನು ಪೂರ್ಣ ಪ್ರಮಾಣದಲ್ಲಿ ಜಾರಿಮಾಡದಿದ್ದರೂ 22 ಪೋಲಿಸ್ ಪೇದೆಗಳನ್ನು ನಿಯೋಜಿಸಿದ್ದೇವೆ. ಪಾಲಿಕೆಯು ಈ ಪಥದ ಮೂಲಸೌಕರ್ಯವನ್ನು ಸಂಪೂರ್ಣಗೊಳಿಸಿದಂತೆ ನಾವೂ ನಿಯಮಗಳನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸುತ್ತೇವೆ” ಎಂದರು.
ನಗರ ಸಾರಿಗೆ ತಜ್ಞ ಪವನ್ ಮುಲುಕುಟ್ಲ ಹೇಳುವ ಪ್ರಕಾರ, ಪೋಲಿಸ್ ಇಲಾಖೆ ನಿಯಮ ಜಾರಿಗೊಳಿಸಲು ಯಾವುದೇ ಮಾದರಿಯನ್ನು ಬಳಸಿದರೂ ಅದು ಸುಸ್ಥಿರವಾಗಿ ಉಳಿಯಬೇಕು. “ಇದು ಸುಸ್ಥಿರವಾಗಿಲ್ಲದೇ ಹೋದರೆ, ಈ ಉದ್ದೇಶ ಸಂಪೂರ್ಣವಾಗಿ ನಶಿಸಿಹೋಗುತ್ತದೆ” ಎಂದು ಅಭಿಪ್ರಾಯ ಹಂಚಿಕೊಂಡರು.
Read the original in English here.
About our volunteer translator
Mukund Gowda is a native Bengalurean, a resident of Baiyappanahalli since birth. He works with KPMG for its Risk Consulting practice. He is a civic leader with B.PAC and founder of Nammuru Nammoru and Namma Baiyappanahalli.