Translated by Madhusudhan Rao
ಸುಧಾ ವಿ, ತನ್ನ ಹೂವಿನ ಗಾಡಿಗೆ ತುಂಬಾ ಹತ್ತಿರದಲ್ಲಿ ಓಡಾಡುವ ಹಸುಗಳನ್ನು ಓಡಿಸುತ್ತಾ, ಉತ್ತರಹಳ್ಳಿಯ ಪ್ರಮುಖ ರಸ್ತೆಯೊಂದರಲ್ಲಿ ಬೀದಿವ್ಯಾಪಾರ ಮಾಡುತ್ತಾರೆ. ಮಕರ ಸಂಕ್ರಾಂತಿಯ ದಿನದಂದು ಗ್ರಾಹಕರ ಹೆಚ್ಚಳ ಇದ್ದರೆ, ಮರುದಿನ ಕಥೆಯೇ ಬೇರೆಯಾಗಿತ್ತು. ಹಿಂದಿನ ದಿನ ತಾಜಾತನ ತುಂಬಿದ್ದ ಕೆಂಪು ಗುಲಾಬಿಗಳನ್ನು ಕೇಳುವವರೇ ಇರಲಿಲ್ಲ. ಸಾಲದ್ದಕ್ಕೆ, ಅದೇ ರಸ್ತೆಯ ಬಳಿ ಮಾರಾಟ ಮಾಡುವ ಇತರ ಮೂರು ಹೂಗಾಡಿಗಳ ಜೊತೆ ತೀವ್ರ ಪೈಪೋಟಿ ಎದುರಿಸುತ್ತಾರೆ.
ಕೋವಿಡ್ ಪಿಡುಗಿನಿಂದ ಉದ್ಯೋಗಗಳು ನಷ್ಟವಾದಾಗ, ಅನೇಕರು ಅನೌಪಚಾರಿಕ ವಲಯಕ್ಕೆ ತೆರಳಿದ್ದು, ಅದರಲ್ಲಿ ದುಡಿಮೆ ಹೆಚ್ಚು, ಅದು ಮೂಲ ಸಂಪನ್ಮೂಲಗಳ ಮೇಲೆ ಅವಲಂಬಿತ ಮತ್ತು ಪ್ರವೇಶಿಸುವುದು ಸುಲಭ ಅನ್ನುವ ಕಾರಣಕ್ಕೆ. ರಸ್ತೆ ವ್ಯಾಪಾರ, ವಿಶೇಷವಾಗಿ, ನಗರದಲ್ಲಿ ಗಮನಾರ್ಹವಾಗಿ ಹೆಚ್ಚಾಗಿದೆ.
ಮನೆ ಕೆಲಸ ಮಾಡುತ್ತಿದ್ದ ಸುಧಾ, ಲಾಕ್‌ಡೌನ್ ನಿಂದ ತಾನು ಕೆಲಸ ಮಾಡುತ್ತಿದ್ದ ಅರ್ಧಕ್ಕಿಂತ ಹೆಚ್ಚು ಮನೆಗಳ ಕೆಲಸ ಕಳೆದುಕೊಂಡಾಗ ಬೀದಿ ವ್ಯಾಪಾರವನ್ನು ಶುರು ಮಾಡಿದರು. “ನನಗೆ ಮೂವರು ಮಕ್ಕಳಿದ್ದು, ನನ್ನ ಪತಿ ಮನೆಯ ಖರ್ಚಿಗೆ ದುಡ್ಡು ಕೊಡುವುದಿಲ್ಲ ಮತ್ತು ನನ್ನ ಮನೆ ಮಾಲೀಕನು ನಮ್ಮನ್ನು ಹೊರಹಾಕುವ ಬೆದರಿಕೆ ಹಾಕಿದ್ದನು” ಎಂದು ಸುಧಾ ಹೇಳುತ್ತಾರೆ.
ಅವರು ಅರೆಕಾಲಿಕವಾಗಿ ರಸ್ತೆ ವ್ಯಪಾರಿಯಾದ ನಂತರ ಇನ್ನೂ ಕೆಲವು ಮನೆಗೆಲಸ ಕಳೆದುಕೊಂಡರು. ಅವರು ಗ್ರಾಹಕರೊಂದಿಗೆ ಸಂಪರ್ಕಕ್ಕೆ ಬರುವ ಬಗ್ಗೆ ಮನೆ ಮಾಲೀಕರು ಚಿಂತಿತರಾಗಿದ್ದರು. ತನ್ನ ತಾಯಿ ತೀರಿಕೊಂಡಾಗ, ಸುಧಾ ಕೊನೆಯ ವಿಧಿಗಳನ್ನು ನಿರ್ವಹಿಸಲು 10 ದಿನಗಳ ಕಾಲ ರಜೆ ಪಡೆದರು. ಅದಕ್ಕಾಗಿ ಒಂದು ಮನೆಯವರು ಅವರನ್ನು ಕೆಲಸದಿಂದ ತೆಗೆದು ಹಾಕಿದರು.
ಕಾನೂನಿನಿಂದ ಗುರುತಿಸಲ್ಪಟ್ಟಿದೆ
2014 ರ ರಸ್ತೆ ವ್ಯಾಪಾರಿಗಳ (ಜೀವನೋಪಾಯದ ರಕ್ಷಣೆ ಮತ್ತು ರಸ್ತೆ ಮಾರಾಟದ ನಿಯಂತ್ರಣ) ಕಾಯ್ದೆ ಸಾರ್ವಜನಿಕ ಪ್ರದೇಶಗಳಲ್ಲಿ ರಸ್ತೆ ವ್ಯಾಪಾರಿಗಳನ್ನು ನಿಯಂತ್ರಿಸುತ್ತದೆ ಮತ್ತು ವ್ಯವಹರಿಸುವ ಹಕ್ಕುಗಳನ್ನು ರಕ್ಷಿಸುತ್ತದೆ. ಈ ಕಾಯ್ದೆಯು ದೇಶಾದ್ಯಂತ ಪ್ರತಿ ನಗರದ ಸ್ಥಳೀಯ ಸಂಸ್ಥೆಗಳಲ್ಲಿ “ಪಟ್ಟಣ ಮಾರಾಟ ಸಮಿತಿ”ಯ (ಟೌನ್ ವೆಂಡಿಂಗ್ ಕಮಿಟಿ – ಟಿವಿಸಿ) ರಚನೆಯನ್ನು ಕಡ್ಡಾಯಗೊಳಿಸುತ್ತದೆ.
ಆದಾಗ್ಯೂ, ಸೆಂಟರ್ ಫಾರ್ ಸಿವಿಲ್ ಸೊಸೈಟಿಯ ಅಧ್ಯಯನವು ಭಾರತದ 7,263 ನಗರ ಸಂಸ್ಥೆಗಳಲ್ಲಿ 1/3 ನೇ ಭಾಗ ಮಾತ್ರ ಟಿವಿಸಿಗಳನ್ನು ಹೊಂದಿವೆ ಎಂದು ಹೇಳುತ್ತದೆ. ಅವುಗಳಲ್ಲಿ 42% ರಲ್ಲಿ ರಸ್ತೆ ವ್ಯಾಪಾರಿಗಳ ಅಗತ್ಯವಿರುವ ಪ್ರಾತಿನಿಧ್ಯದ ಕೊರತೆಯಿದ್ದು, ಇದು ಕಾಯಿದೆಯ ಸ್ಪಷ್ಟ ಉಲ್ಲಂಘನೆಯಾಗಿದೆ. ಅಷ್ಟೇ ಅಲ್ಲದೆ, ಅವುಗಳಲ್ಲಿ ಇನ್ನೂ ಕಡಿಮೆ ಮಂದಿ ಟಿವಿಸಿಗಳು ದೂರು ಪರಿಹಾರ ಸಮಿತಿಗಳನ್ನು ಹೊಂದಿವೆ.
ಈ ಕಾಯ್ದೆ ಜಾರಿಗೆ ಬಂದು ಆರು ವರ್ಷಗಳಾದರೂ, ಬೆಂಗಳೂರಿನಲ್ಲಿ ಟಿವಿಸಿಗಳು ರಚನೆಯಾದದ್ದು ಒಂದು ವರ್ಷದ ಹಿಂದೆಯಷ್ಟೇ. ನಗರದ ಎಂಟು ವಲಯಗಳಲ್ಲಿ, ಏಳು ವಲಯಗಳು ಟಿವಿಸಿಗಳನ್ನು ಹೊಂದಿವೆ. ಬೊಮ್ಮನಹಳ್ಳಿ ಇದಕ್ಕೆ ಹೊರತು.
Read more: How street vendors survive in “silent” Sadashivanagar
ಈ ಕಾಯ್ದೆಯನ್ನು ಕೇಂದ್ರೀಯವಾಗಿ ಜಾರಿಗೊಳಿಸಲಾಗಿದ್ದರೂ, ಟಿವಿಸಿಗಳಿಗೆ ಸಂಬಂಧಿಸಿದ ನಿಯಮಗಳನ್ನು ರೂಪಿಸುವುದು ರಾಜ್ಯಗಳಿಗೆ ಬಿಟ್ಟದ್ದು.
ಬೇರೆ ಬೇರೆ ವಲಯಗಳ ಟಿವಿಸಿಗಳು ನಡೆಸುವ ಸಭೆಗಳು ಯಾವಾಗ ಮತ್ತು ಹೇಗೆ ನಡೆಯುತ್ತವೆ ಎಂಬ ವಿಷಯದಲ್ಲಿ ಏಕಪ್ರಕಾರವಾಗಿಲ್ಲ ಎಂದು ಬೆಂಗಳೂರು ಜಿಲ್ಲಾ ಬೀದಿ ವ್ಯಾಪರಿ ಸಂಘಟನೆಗಳ ಒಕ್ಕೂಟ (ಸ್ಟ್ರೀಟ್ ವೆಂಡರ್ಸ್ ಯೂನಿಯನ್ ಫೆಡರೇಶನ್) ಅಧ್ಯಕ್ಷ ಬಾಬು ಎಸ್ ಹೇಳುತ್ತಾರೆ.
ದಕ್ಷಿಣ ವಲಯ ಟಿವಿಸಿ ಸದಸ್ಯ ಅಮಾನುಲ್ಲಾ ಕೆ, ಟಿವಿಸಿಗಳು ರೂಪುಗೊಂಡು ಒಂದು ವರ್ಷವಾಗಿದ್ದರೂ, ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಇನ್ನೂ ಅವರಿಗೆ ಕಚೇರಿಗಳನ್ನು ನೀಡಿಲ್ಲ ಎಂದು ಹೇಳುತ್ತಾರೆ.
ದಕ್ಷಿಣ ವಲಯ ಸಮಿತಿ ನಡೆಸಿದ ಕೊನೆಯ ಸಭೆ ಕಳೆದ ವರ್ಷ ನವೆಂಬರ್‌ನಲ್ಲಿತ್ತು, ಮತ್ತು ಮುಂದಿನ ಸಭೆ ಎರಡು ವಾರಗಳಲ್ಲಿ ನಡೆಯಬೇಕಿತ್ತು. ನಗರದಲ್ಲಿ ಮಾರಾಟಗಾರರನ್ನು ಸಮೀಕ್ಷೆ ಮಾಡುವುದು ಮತ್ತು ಮಾರಾಟ ಪ್ರಮಾಣಪತ್ರಗಳು ಮತ್ತು ಐಡಿ ಕಾರ್ಡ್‌ಗಳನ್ನು ನೀಡುವ ಜವಾಬ್ದಾರಿಯನ್ನು ಈ ಸಮಿತಿಯು ಹೊಂದಿದೆ.
ಕೊನೆಯ ಸಮೀಕ್ಷೆಯನ್ನು 2017 ರಲ್ಲಿ ನಡೆಸಲಾಗಿದ್ದು, ತದನಂತರ 18,000-19,000 ಮಾರಾಟಗಾರರಿಗೆ ದಾಖಲೆಗಳನ್ನು ನೀಡಲಾಗಿತ್ತು. “ಲಾಕ್‌ಡೌನ್ ರಸ್ತೆ ವ್ಯಾಪಾರವನ್ನು ಹೆಚ್ಛಿಸಿದ ಕಾರಣ, ಆ ವ್ಯಾಪಾರಿಗಳನ್ನು ಗುರುತಿಸಿ ಸರಿಯಾದ ಗುರುತು ಚೀಟಿ ಮತ್ತು ಪ್ರಮಾಣಪತ್ರವನ್ನು ನೀಡಬೇಕಾಗಿದೆ” ಎಂದು ಅಮಾನುಲ್ಲಾ ಹೇಳುತ್ತಾರೆ. ಇದನ್ನು ಮುಂದಿನ ಸಭೆಯಲ್ಲಿ ಕೈಗೆತ್ತಿಕೊಳ್ಳಬೇಕಾಗಿತ್ತು.
ಒಂದು ಕ್ರಿಯಾತ್ಮಕ ಟಿವಿಸಿ, ರಸ್ತೆ ವ್ಯಾಪಾರಿಗಳಿಗೆ ರಾಜ್ಯ ಮತ್ತು ಕೇಂದ್ರ ಪ್ರಾಯೋಜಿತ ಸಾಮಾಜಿಕ ಸಂರಕ್ಷಣಾ ಯೋಜನೆಗಳಿಗೆ ನೋಂದಾಯಿಸಲು ಸಹಾಯ ಮಾಡುವುದಲ್ಲದೆ, ಅವರಿಗೆ ಒಂದು ಮಾದರಿಯ ಆರ್ಥಿಕ ಭದ್ರತೆಯನ್ನೂ ನೀಡುತ್ತದೆ ಎಂದು ಅವರು ಹೇಳಿದರು.
ಮನಬಂದಂತೆ ಹೊರಹಾಕುವುದು
ಈ ಕಾಯಿದೆಯು ಉದ್ದೇಶದಲ್ಲಿ ಪ್ರಗತಿಪರವಾಗಿದ್ದರೂ, ಅದರ ಅನುಷ್ಠಾನದಲ್ಲಿ ಕುಂದು ಕೊರತೆಗಳಿವೆ.
ಕಳೆದ 30 ವರ್ಷಗಳಿಂದ ವಿಜಯನಗರದಲ್ಲಿ ಹಣ್ಣುಗಳನ್ನು ಮಾರಾಟ ಮಾಡುತ್ತಿರುವ 62 ವರ್ಷದ ಗೌರಮ್ಮನ ಉದಾಹರಣೆಯನ್ನು ನೋಡಿ. ಸಂಕ್ರಾಂತಿಯ ಹಿಂದಿನ ದಿನ ಪೊಲೀಸರು ಎಲ್ಲಾ ರಸ್ತೆ ವ್ಯಾಪಾರಿಗಳನ್ನು ತಮ್ಮ ಗಾಡಿಗಳನ್ನು ರಸ್ತೆಯಿಂದ ಸರಿಸಲು ಕೇಳಿಕೊಂಡರು. ಗೌರಮ್ಮನನ್ನು ಗಾಡಿ ಸರಿಸಲು ಕೇಳಿದಾಗ, ಗ್ರಾಹಕರು ಬೇರೆಯ ಸ್ಥಾನದಲ್ಲಿ ಗಾಡಿಯನ್ನು ಗಮನಿಸುವುದಿಲ್ಲ ಎಂದು ಅವರು ಹೇಳಿದರು.
ಹೀಗೆ ಭಿನ್ನಾಭಿಪ್ರಾಯ ಉಂಟಾದ ನಂತರ, ಒಬ್ಬ ಪೋಲೀಸ್ ಅಧಿಕಾರಿ ಆಕೆಯ ತೂಕ ಮತ್ತು ತಕಡಿಗಳನ್ನು ಜಪ್ತಿಮಾಡಿಕೊಂಡು, ಗೌರಮ್ಮ ಮತ್ತು ಅವರ ಸೊಸೆ ಮನವಿ ಮಾಡಿದ ನಂತರವೂ ಅದನ್ನು ಹಿಂದಿರುಗಿಸಲು ಒಪ್ಪಲಿಲ್ಲ. “ನಾನು ಈಗ ಮೂರು ದಶಕಗಳಿಂದ ಅದೇ ಸ್ಥಳದಲ್ಲಿದ್ದೇನೆ ಎಂದು ಅವರಿಗೆ ಹೇಳಿದೆ” ಎಂದು ಗೌರಮ್ಮ ಹೇಳಿದರು.
ಅವರ ಸುತ್ತಲಿನವರು ಗೌರಮ್ಮನ ಕಾಲಿನ ಬಲಹೀನತೆ ಬಗೆಗೂ ಪೊಲೀಸರಿಗೆ ತಿಳಿಹೇಳಿದರು. ಹಬ್ಬವು ಮರುದಿನ ಇರುವುದರಿಂದ ತೂಕವನ್ನು ಹಿಂದಿರುಗಿಸಬೇಕೆಂದು ಅವರು ವಿನಂತಿಸಿದರು. ಪೊಲೀಸರು ಮಣಿಯಲೇ ಇಲ್ಲವಂತೆ. ಎರವಲು ಪಡೆದ ತೂಕ ಮತ್ತು ತಕಡಿಯೊಡನೆ ಅವರು ತಮ್ಮ ವ್ಯವಹಾರವನ್ನು ಮುಂದುವರಿಸಿದರು. ಆಕೆಯ ಕುಟುಂಬವು ಪೊಲೀಸ್ ಠಾಣೆಗೆ ಹಲವಾರು ಬಾರಿ ಹೋಗಿ ಬಂದರೂ, ತೂಕ ಮತ್ತು ತಕಡಿಗಳನ್ನು ಹಿಂಪಡೆಯಲು ಸಾಧ್ಯವಾಗಲಿಲ್ಲ.
Read more: Bengaluru’s street vendors: A vibrant community deprived of rights
ಗೌರಮ್ಮ ನ್ಯಾಯಸಮ್ಮತವಾದ ಪರವಾನಗಿ ಮತ್ತು ಪ್ರಮಾಣಪತ್ರವನ್ನು ಹೊಂದಿದ್ದು, ರಸ್ತೆ ವ್ಯಾಪಾರ ಪ್ರಾರಂಭಿಸಿದಾಗಿನಿಂದ ತಾನು ಎಂದೂ ಅಂತಹ ವಾಗ್ವಾದವನ್ನು ಎದುರಿಸಲಿಲ್ಲ ಎಂದು ಹೇಳುತ್ತಾರೆ. ಕೋವಿಡ್ ಪೂರ್ವದಲ್ಲಿ, ಅವರು ದಿನಕ್ಕೆ ರೂ.3,000-4,000 ವಹಿವಾಟು ನಡೆಸುತ್ತಿದ್ದರು, ಆದರೆ ಸಾಂಕ್ರಾಮಿಕದಿಂದಾಗಿ ಆಕೆಯ ಆದಾಯವು ಕುಸಿಯಿತು. ಸ್ಥಳಾಂತರಿಸುವುದರಿಂದ ತನ್ನ ಹಳೆಯ ಗ್ರಾಹಕರನ್ನು ಕಳೆದುಕೊಳ್ಳಬಹುದು ಎಂದು ಅವರು ಹೇಳಿದರು.
ರಸ್ತೆ ವ್ಯಾಪಾರಿಗಳಿಗೆ ಸಂಬಂಧಿಸಿದಂತೆ ಪೊಲೀಸರಿಗೆ ಸಾರ್ವಜನಿಕರಿಂದ ದೂರುಗಳು ಬಂದರೆ, ಅವರು ಮೊದಲು ಅವನ್ನು ಟಿವಿಸಿ ಮುಂದೆ ಹಾಜರುಪಡಿಸಬೇಕು ಮತ್ತು ಸಮಿತಿಯು ಅಗತ್ಯ ಕ್ರಮ ತೆಗೆದುಕೊಳ್ಳುತ್ತದೆ ಎಂದು ಬಾಬು ಹೇಳುತ್ತಾರೆ. “ಯಾವುದೇ ಸಂದರ್ಭಗಳಲ್ಲಿ ಪೊಲೀಸರು ಅಥವಾ ಸರ್ಕಾರಸಂಬಂಧಿ ಅಧಿಕಾರಿಗಳು ವ್ಯಾಪಾರಿಗಳ ವಿರುದ್ಧ, ಅವರನ್ನು ಹೊರಹಾಕುವುದು ಅಥವಾ ಅವರ ವಸ್ತುಗಳನ್ನು ಜಪ್ತಿ ಮಾಡಿಕೊಳ್ಳುವಂತಹ ಸ್ವತಂತ್ರ ಕ್ರಮ ತೆಗೆದುಕೊಳ್ಳಲು ಅನುಮತಿ ಇಲ್ಲ” ಎಂದು ಬಾಬು ಹೇಳುತ್ತಾರೆ.
ಹೊರಹಾಕುವ ಪ್ರಯತ್ನಗಳನ್ನು ಹೆಚ್ಚಾಗಿ ಶ್ರೀಮಂತ ನಿವಾಸಿಗಳು, ನಿವಾಸ ಕಲ್ಯಾಣ ಸಂಘಗಳು (ಆರ್ ಡಬ್ಲ್ಯೂ ಏ) ಅಥವಾ ದೊಡ್ಡ ಸಂಸ್ಥೆಗಳು ಮಾಡುತ್ತವೆ ಎಂದು ವಕೀಲ ಮತ್ತು ಫೆಡರೇಶನ್ ಸದಸ್ಯ ವಿನಯ್ ಶ್ರೀನಿವಾಸ ಹೇಳುತ್ತಾರೆ. ಹೊರಹಾಕುವಿಕೆಯ ಎಲ್ಲಾ ನಿದರ್ಶನಗಳನ್ನು ಟಿವಿಸಿ ಮುಂದೆ ತರಬೇಕು ಎಂದು ಅವರು ಬಾಬು ಅವರ ಮಾತು ಒಪ್ಪುತ್ತಾರೆ.
ಆಡಳಿತಾತ್ಮಕ ಅಜ್ಞಾನ
2014 ರಲ್ಲಿ ರಸ್ತೆ ವ್ಯಾಪಾರಿಗಳ (ಜೀವನೋಪಾಯ ಸಂರಕ್ಷಣೆ ಮತ್ತು ರಸ್ತೆ ಮಾರಾಟವನ್ನು ನಿಯಂತ್ರಿಸುವ) ಕಾಯ್ದೆಯಡಿ ರಸ್ತೆ ವ್ಯಾಪಾರಿಗಳ ಹಕ್ಕುಗಳನ್ನು ನ್ಯಾಯಬದ್ಧಗೊಳಿಸಲಾಗಿದ್ದರೂ, ಅಧಿಕಾರಿಗಳು ಇವನ್ನು ಕಡೆಗಣಿಸುತ್ತಿದ್ದಾರೆ.
ಇದಕ್ಕೆ ಬಿಬಿಎಂಪಿಯನ್ನು ವಿನಯ್ ದೂಷಿಸುತ್ತಾರೆ. “ಆರು ವರ್ಷಗಳ ನಂತರವೂ, ಪೊಲೀಸ್ ಮತ್ತು ಸರ್ಕಾರಿ ಅಧಿಕಾರಿಗಳಿಗೆ ಈ ಕಾಯಿದೆಯ ಬಗ್ಗೆ ತಿಳಿದಿಲ್ಲ” ಎಂದು ಅವರು ಹೇಳುತ್ತಾರೆ, “ಅವರು ಇನ್ನೂ ರಸ್ತೆ ವ್ಯಾಪಾರವನ್ನು ಕಾನೂನುಬಾಹಿರವೆಂದು ಪರಿಗಣಿಸುತ್ತಾರೆ”.
ಈ ವ್ಯಾಪಾರಿಗಳನ್ನು ಕುರಿತ ಈ ರೀತಿಯ ವರ್ತನೆ ಒಂದು ಬಗೆಯ ವರ್ಣಶ್ರೇಣಿಯನ್ನೂ ತೋರಿಸುತ್ತೆ ಎಂದು ಅವರು ಹೇಳುತ್ತಾರೆ. ಅಧಿಕಾರಿಗಳಿಗೆ ಮತ್ತು ಸ್ಥಳೀಯ ಪ್ರಾಧಿಕಾರಿಗಳಿಗೆ ತರಬೇತಿ ನೀಡುವುದು ಕಾಯಿದೆಯ ಒಂದು ನಿಬಂಧನೆ. “ನಾವು ಇದಕ್ಕಾಗಿ ಒತ್ತಾಯಿಸುತ್ತಿದ್ದೇವೆ, ಆದರೆ ಯಾವುದೇ ಪ್ರಯೋಜನವಾಗಿಲ್ಲ” ಎಂದು ವಿನಯ್ ಹೇಳುತ್ತಾರೆ.
ರಸ್ತೆ ವ್ಯಾಪಾರಿಗಳಿಗೆ ಅವರ ಹಕ್ಕುಗಳ ಬಗ್ಗೆ ಶಿಕ್ಷಣ ನೀಡುವುದು ಸಹ ಅಗತ್ಯವಾಗಿದೆ ಎಂದು ಅವರು ಹೇಳುತ್ತಾರೆ. “ಬಿಬಿಎಂಪಿಯು ಅವರಿಗೆ ಮೂಲಭೂತ ಸೌಲಭ್ಯಗಳಾದ ಶೌಚಾಲಯಗಳು, ಸುರಕ್ಷಿತ ಕುಡಿಯುವ ನೀರು, ಗೋದಾಮುಗಳು ಮತ್ತು ಕಠಿಣ ಹವಾಮಾನ ಪರಿಸ್ಥಿತಿಗಳಿಂದ ರಕ್ಷಣೆ ಇವೆಲ್ಲವನ್ನು ಒದಗಿಸಬೇಕು” ಎಂದು ವಿನಯ್ ವಾದಿಸುತ್ತಾರೆ.
ಅಧಿಕಾರಿಗಳ ಕಾಯ್ದೆಯ ಅಜ್ಞಾನದಿಂದಾಗಿ ವ್ಯಾಪಾರಿಗಳನ್ನು ಮನಸ್ಸು ಬಂದಂತೆ ಓಡಿಸಲಾಗುತ್ತದೆ ಮತ್ತು ಕಿರುಕುಳ ಕೊಡಲಾಗುತ್ತದೆ ಎಂದು ಬಾಬು ಅಭಿಪ್ರಾಯಪಟ್ಟಿದ್ದಾರೆ.
ಶಾಶ್ವತ ವಲಯಗಳು ರಸ್ತೆ ವ್ಯಾಪಾರಿಗಳಿಗೆ ಸಾಕಷ್ಟು ಉದ್ಯೋಗ ಸುರಕ್ಷತೆಯನ್ನು ನೀಡುತ್ತದೆ ಮತ್ತು ಆತ್ಮವಿಶ್ವಾಸವನ್ನು ತುಂಬುತ್ತದೆ. “ಸಾರ್ವಜನಿಕರಿಗೆ ತೊಂದರೆಯಾಗದಂತೆ ವ್ಯಪಾರದಿಂದ ಜೀವನೋಪಾಯವನ್ನು ಗಳಿಸುವುದು ನಮ್ಮ ಉದ್ದೇಶ, ಮತ್ತು ಇದನ್ನು ಮಾಡಲು ಸರ್ಕಾರ ನಮಗೆ ಸಹಾಯ ಮಾಡಬೇಕು” ಎಂದು ಬಾಬು ಹೇಳುತ್ತಾರೆ.
ನಗರದಲ್ಲಿ ಪ್ರತ್ಯೇಕ ಮಾರಾಟ ವಲಯಗಳ ಅವಶ್ಯಕತೆಯ ಬಗ್ಗೆ ಮಾತನಾಡಿದ ಅಮಾನುಲ್ಲಾ, ಈ ಕುರಿತು ಬಿಬಿಎಂಪಿ ಅಸಂಖ್ಯಾತ ಸಭೆಗಳನ್ನು ನಡೆಸಿದ್ದರೂ, ಯಾವುದೇ ವಾರ್ಡ್‌ನಲ್ಲೂ ಇಂತಹ ವಲಯಗಳನ್ನು ರಚಿಸಲು ಸಕ್ರಿಯ ಪ್ರಯತ್ನ ಮಾಡಿಲ್ಲ ಎನ್ನುತ್ತಾರೆ. ಆಯ್ದ ಕೆಲವು ವಾರ್ಡ್‌ಗಳಲ್ಲಿ ಈ ವಲಯಗಳಿಗೆ ಶಿಫಾರಸುಗಳನ್ನು ಮಾಡಿದ್ದೇನೆ, ಆದರೆ ಬಿಬಿಎಂಪಿ ಇನ್ನೂ ಉದ್ದೇಶಿತ ಪ್ರದೇಶಗಳ ಬಗ್ಗೆ ಚರ್ಚಿಸಿ, ವಿವಿಧ ಸರ್ಕಾರಿ ಸಂಸ್ಥೆಗಳಿಂದ ಆಕ್ಷೇಪಣೆಗಳನ್ನು ಆಹ್ವಾನಿಸಿಲ್ಲ ಎಂದು ಬಾಬು ಹೇಳುತ್ತಾರೆ.
Read more: Resettled vendors rue lack of business and facilities in Chandigarh’s new vending zones
ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಹ್ಯೂಮನ್ ಸೆಟಲ್ಮೆಂಟ್ಸ್‌ನ ಶೈಕ್ಷಣಿಕ ಮತ್ತು ಸಂಶೋಧನಾ ಸಂಸ್ಥೆಯ ಮುಖ್ಯಸ್ಥರಾದ ಶ್ರಿಯಾ ಆನಂದ್ ಅವರ ಪ್ರಕಾರ, ರಸ್ತೆ ವ್ಯಾಪರವನ್ನು ನಿಯಂತ್ರಿಸಲು ನಗರ ಮಟ್ಟದ ಚೌಕಟ್ಟು ಇಲ್ಲದಿರುವುದು ವ್ಯಾಪಾರಿಗಳಿಗೆ ಅಹಿತಕರ ಕೆಲಸದ ವಾತಾವರಣವನ್ನು ಸೃಷ್ಟಿಸುತ್ತದೆ. “ತಮ್ಮ ವೃತ್ತಿಯ ಹಕ್ಕುಗಳನ್ನು ಪ್ರತಿಪಾದಿಸುವುದು ನಿರಂತರ ಹೋರಾಟವಾಗುತ್ತದೆ” ಎಂದು ಶ್ರಿಯಾ ಹೇಳುತ್ತಾರೆ. ವ್ಯಾಪಾರಿಗಳು ಪೊಲೀಸ್ ಮತ್ತು ಸ್ಥಳೀಯ ಅಧಿಕಾರಿಗಳ ಕೃಪೆಯ ಮೇಲೆ ಬಾಳಬೇಕಾಗಿದೆ ಎಂದು ಇದರರ್ಥ.
ನಗರಾಭಿವೃದ್ಧಿ ಯೋಜನೆಗಳಿಂದ ದೂರ
ರಸ್ತೆ ವ್ಯಾಪಾರವು ಬಡವರಿಗೆ ಜೀವನೋಪಾಯದ ಅವಕಾಶಗಳನ್ನು ಖಾತರಿಪಡಿಸುವುದಾದರೂ, ನಗರಾಭಿವೃದ್ಧಿ ಯೋಜನೆಗಳಲ್ಲಿ ಇದನ್ನು ಗುರುತಿಸಲಾಗಿಲ್ಲ. ರಸ್ತೆವ್ಯಾಪಾರ ಬಡತನದಿಂದ ಹೊರಬರಲು ಒಂದು ಮಾರ್ಗವಾಗಿರುವುದರ ಜೊತೆಗೆ, ನಗರದ ಬಡ ಮತ್ತು ಮಧ್ಯಮ ವರ್ಗದ ನಿವಾಸಿಗಳಿಗೆ ಅಗ್ಗದ ದರದಲ್ಲಿ ಅಗತ್ಯ ಸೇವೆಗಳನ್ನು ಇದು ಒದಗಿಸುತ್ತದೆ.
“ರಸ್ತೆ ವ್ಯಾಪಾರಿಗಳು ಸದ್ಯದ ಪರಿಸ್ಥಿತಿಯಲ್ಲಿ ತೊಳಲಾಡುತ್ತಲೇ ಮುಂದುವರಿಯುತ್ತಿದ್ದಾರೆ. ತಮಗಾಗಿ ಮಾತನಾಡಲು ಅವರಿಗೆ ನಗರ ಮಟ್ಟದಲ್ಲಿ ಸಾಂಸ್ಥಿಕ ಸ್ಥಾನಮಾನವಿಲ್ಲ” ಎಂಬುದರ ಬಗ್ಗೆ ಶ್ರಿಯಾ ಗಮನಸೆಳೆದಿದ್ದಾರೆ. ಹಲವು ಆದಾಯ ಗುಂಪುಗಳಲ್ಲಿನ ನಿವಾಸಿಗಳು ನಿಯಮಿತವಾಗಿ ಆಹಾರ ಖರೀದಿಸಲು ರಸ್ತೆ ವ್ಯಾಪಾರಿಗಳನ್ನು ಅವಲಂಬಿಸಿದ್ದರೂ, ಅವರನ್ನು ನಗರ ಆರ್ಥಿಕತೆಗೆ ನೆರವಾಗುವವರಾಗಿ ಕಾಣಲಾಗುವುದಿಲ್ಲ ಅಥವಾ ನಗರದ ಮೂಲಸೌಕರ್ಯದ ಅವಿಭಾಜ್ಯ ಅಂಗವಾಗಿ ನೋಡಲಾಗುವುದಿಲ್ಲ. ಅವರನ್ನು ಸಾರ್ವಜನಿಕ ಜಾಗಗಳನ್ನು ಆಕ್ರಮಿಸಿಕೊಂಡವರಂತೆ ಕಾಣಲಾಗುತ್ತೆ ಎಂದು ಅವರು ಹೇಳುತ್ತಾರೆ.
ಬೀದಿ ಮಾರಾಟದ ಬಗೆಗಿನ ವಿರೋಧವು ಜಾಗತಿಕ ನಗರದ ದೃಷ್ಟಿ ಮತ್ತು ಅದಕ್ಕೆ ಸಂಬಂಧಿಸಿದ ಅಂದದರಿಮೆಯ ಕಾರಣದಿಂದಲೂ ಸೃಷ್ಟಿಯಾಗಿದೆ ಎಂದು ಶ್ರಿಯಾ ಹೇಳುತ್ತಾರೆ. “ನಗರಕ್ಕಾಗಿ ಬೃಹದ್ಯೋಜನೆಗಳನ್ನು ರೂಪಿಸುವಾಗ ಅವರಿಗೆ ಆದ್ಯತೆ ನೀಡಬೇಕಾಗಿದೆ. ಕೆಲವು ಪ್ರದೇಶಗಳನ್ನು “ವಿತರಣಾ-ಶೂನ್ಯ” ವಲಯಗಳೆಂದು ಪರಿಗಣಿಸುವ ಅಧಿಕಾರ ಸರ್ಕಾರಕ್ಕೆ ಇದ್ದಾಗ, ಅದರ ವಿರುದ್ಧವಾದ ದಿಕ್ಕಿನಲ್ಲೂ ಯಾಕೆ ಯೋಚಿಸಬಾರದು?” ಅವರು ಕೇಳುತ್ತಾರೆ.
ವಿಧಿ ಸೆಂಟರ್ ಫಾರ್ ಲೀಗಲ್ ಪಾಲಿಸಿಯ ಸಂಶೋಧನಾ ಸದಸ್ಯೆ ಸ್ನೇಹಾ ವಿಶಾಖಾ ಹೇಳುತ್ತಾರೆ: “ನಾಗರೀಕ ನೀತಿಗಳು ಸ್ಥಳೀಯ ಸಂದರ್ಭಕ್ಕೆ ಪೂರಕವಾಗಿರಬೇಕು. ರಸ್ತೆ ವ್ಯಾಪಾರಿಗಳನ್ನು ಹೊರಗಿನಿಂದ ಬಂದು ಆಕ್ರಮಿಸಿಕೊಂಡವರು ಎಂದು ಪರಿಗಣಿಸುವ ಬದಲು ಹಕ್ಕುದಾರರೆಂದು ಪರಿಗಣಿಸಬೇಕು ”
Read the original in English here.
Also Read:
- Street vendors demand relief, offer support to govt in tackling COVID-19
- Wanted: New thought and regulation for the informal sector in India in a post-COVID world
- How the Chandigarh Municipality raked in Rs 21 crore from its street vendor regularisation plan
- ಪ್ರೀತಿ, ಮದುವೆ, ಕಾನೂನು: ಒಂದು ವಿಶೇಷ ಕಾಯ್ದೆ
- ಬೆಂಗಳೂರಿನ ಸಮಗ್ರ ಸಾರಿಗೆ ಯೋಜನೆ ಕರಡು: ಕೆಲವು ಪಾದಚಾರಿ ಯೋಜನೆಗಳು
- ಸಮಗ್ರ ಸಾರಿಗೆ ಯೋಜನೆ: ಎಲಿವೇಟೆಡ್ ಕಾರಿಡಾರ್ ಯೋಜನೆಗೆ 18,480 ಕೋಟಿ
- ರಸ್ತೆಗುಂಡಿ ಅಫಘಾತ ಸಂತ್ರಸ್ತರಿಗೆ ಪಾಲಿಕೆಯಿಂದ ಪರಿಹಾರ ವಿಳಂಬ! ಪರಿಹಾರ ಧನಕ್ಕೆ ವ್ಯವಸ್ಥಿತ ಕಾರ್ಯಸೂಚಿ ಇಲ್ಲದೆ ಹೈರಾಣಾದ ಸಂತ್ರಸ್ತರು
About our volunteer translator
Madhusudhan Rao is a long-time resident of South Bengaluru. He works in the IT sector but dabbles in other passions from time to time, mainly centred around volunteering, teaching and language.