ಮೂಲಭೂತ ಸೌಲಭ್ಯದ ಸುವ್ಯವಸ್ಥೆಯೇ ಸುಂದರ ನಗರದ ಆಧಾರ. ಸಿಲಿಕಾನ್ ಸಿಟಿ, ಉದ್ಯಾನನಗರಿ, ಐಟಿ-ಸಿಟಿ ಎಂದೆಲ್ಲ ಕರೆಯಿಸಿಕೊಳ್ಳುವ ಬೆಂಗಳೂರು ಪ್ರತಿ ನಿತ್ಯ ವ್ಯಾಪ್ತಿಯನ್ನು ವಿಸ್ತರಿಸಿಕೊಳ್ಳುತ್ತಲೇ ಸಾಗುತ್ತಿರುವ ನಗರ. ಇಲ್ಲಿ ಪ್ರತಿ ಸೂರ್ಯೋದಯ ಹಾಗೂ ಸೂರ್ಯಾಸ್ತ ಗಳು ಕೂಡಾ ಹೊಸ-ಹೊಸ ಬೆಳವಣಿಗೆ, ಬದಲಾವಣೆ ಹಾಗೂ ಬೆಳವಣಿಗೆಗೆ ಸಾಕ್ಷಿಯಾಗುತ್ತವೆ.
ಪ್ರತಿನಿತ್ಯ ವ್ಯವಹಾರ, ಉದ್ಯೋಗ, ಶಿಕ್ಷಣ, ಆರೋಗ್ಯ – ಹೀಗೆ ನಾನಾ ಉದ್ದೇಶಗಳಿಗಾಗಿ ಸಾವಿರಾರು ಕನಸುಗಳನ್ನು ಹೊತ್ತು ನಮ್ಮ ರಾಜ್ಯದ ಹಳ್ಳಿಗಳಿಂದ ಆರಂಭಿಸಿ ದೂರದ ದೇಶದ ಸಾವಿರಾರು ಜನರು ಆಗಮಿಸುತ್ತಾರೆ. ಹೀಗೆ ಪ್ರತಿನಿತ್ಯ ಹೊಸ ಬದುಕು ಕಟ್ಟುವ ಸಾವಿರಾರು ಜನರಿಂದ ನಗರದ ಆಡಳಿತ, ಸುವ್ಯವಸ್ಥೆ ಹಾಗೂ ಸೌಲಭ್ಯ ಎಲ್ಲವೂ ಕೂಡಾ ದೊಡ್ಡ ಸವಾಲಾಗಿ ಪರಿಣಮಿಸುತ್ತಿದೆ. ನಗರದಲ್ಲಿನ ಲಕ್ಷಾಂತರ ಮನೆಗಳು, ದಶಲಕ್ಷ ಲೀಟರನಷ್ಟು ನೀರಿನ ಅಗತ್ಯ, ಸ್ವಚ್ಚತೆ, ಕಸದ ನಿರ್ವಹಣೆ, ರಾಜಕಾಲುವೆಗಳು ಹಾಗೂ ಚರಂಡಿಗಳ ನಿರ್ವಹಣೆ ನಗರದ ಆಡಳಿತ ಪಾಲಿಗಿರುವ ಬಹುದೊಡ್ಡ ಸವಾಲು.
ಹೀಗಾಗಿ ಈ ಸಮಸ್ಯೆಗಳನ್ನು ಬಗೆಹರಿಸಲು ಇಲ್ಲಿ ಬದುಕುತ್ತಿರುವ ಪ್ರತಿಯೊಬ್ಬ ವ್ಯಕ್ತಿಯೂ ನಗರದ ಪ್ರಥಮಪ್ರಜೆ ಮೇಯರ್ ರಂತಾಗಿ ನಗರದ ಸ್ವಾಸ್ಥ್ಯ ಕಾಪಾಡಲು ಮುಂದಾಗುವ ಅಗತ್ಯವಿದೆ. ಹೀಗಾಗಿ ನಾನು ಈ ನಗರದ ಮೇಯರ್ ಆದರೆ ಕೈಗೊಳ್ಳುವ ಕ್ರಮಗಳು, ಸುಧಾರಣೆಯ ಕನಸುಗಳ ಕುರಿತು ನಿಮ್ಮ ಜೊತೆ ನನ್ನ ಅಭಿಪ್ರಾಯ ಹಂಚಿಕೊಳ್ಳಲು ಬಯಸುತ್ತೇನೆ. ನಾನು ಮೇಯರ್ ಆಗಿ ಅಯ್ಕೆಯಾಗುತ್ತಿದ್ದಂತೆ ಮೊದಲು ನಗರದ ಪ್ರದಕ್ಷಿಣೆ ಕೈಗೊಳ್ಳಬಯಸುತ್ತೇನೆ ಯಾಕೆಂದರೆ ನಗರದ ಪ್ರದಕ್ಷಿಣೆ ನಿಮಗೆ ವಾಸ್ತವದ ದರ್ಶನ ಮಾಡಿಸುತ್ತದೆ. ಅಲ್ಲಿ ನಿಮ್ಮ ಅಧಿಕಾರಿಗಳು ತಮ್ಮ ಸ್ವಾರ್ಥಕ್ಕಾಗಿ ಮುಚ್ಚಿಟ್ಟ ಸತ್ಯದ ದರ್ಶನವಾಗುತ್ತದೆ.
ಪ್ರತಿಯೊಂದು ಏರಿಯಾಗೆ ಭೇಟಿ ನೀಡಿ ಅಲ್ಲಿನ ಜನರನ್ನು ಭೇಟಿ ಮಾಡಿ ಅವರ ಅಹವಾಲುಗಳನ್ನು ಆಲಿಸುವುದರಿಂದ ಆ ಏರಿಯಾದಲ್ಲಿರುವ ಸಮಸ್ಯೆಗಳ ಸಂಪೂರ್ಣ ಚಿತ್ರಣ ಪಡೆದುಕೊಳ್ಳಲು ನೆರವಾಗುತ್ತದೆ. ಅಲ್ಲದೇ ಪ್ರತಿಯೊಂದು ಏರಿಯಾಕ್ಕೆ ತೆರಳಿ ಅಲ್ಲಿನ ಡ್ರೈನೇಜ್ ವ್ಯವಸ್ಥೆ, ರಾಜಕಾಲುವೆಗಳ ಸ್ಥಿತಿ ಗಮನಿಸುತ್ತೇನೆ. ಯಾಕೆಂದರೆ ಈಗ ಕಳೆದ ಒಂದು ವಾರದಿಂದ ಸತತ ಮಳೆಯಿಂದ ಬೆಂಗಳೂರಿನಲ್ಲಿ ಪ್ರವಾಹದ ಸ್ಥಿತಿ ಎದುರಾಗಿದೆ. ಜನರು ಅಪಾರ್ಟ್ಮೆಂಟ್‌ಗಳ ಬೇಸ್-ಮೆಂಟ್ ಗೆ ಬರಲಾರದೇ ಕಂಗಾಲಾಗಿದ್ದರೆ, ಗ್ರೌಂಡ್ ಪ್ಲೋರ್ ನಲ್ಲಿ ಮನೆ ಹೊಂದಿರುವ ಜನರು ಮನೆಗೆ ನುಗ್ಗಿದ ಕೊಳಚೆ ನೀರು ಸ್ವಚ್ಛಗೊಳಿಸುವುದರಲ್ಲಿ ನಿರತರಾಗಿದ್ದಾರೆ. ಇನ್ನು ರಸ್ತೆಗಳಲ್ಲಂತೂ ವಾಹನಗಳೇ ತೇಲಿಕೊಂಡು ಹೋಗುವಂತೆ ಸ್ಥಿತಿ ನಿರ್ಮಾಣವಾಗಿದೆ.
ಈ ಎಲ್ಲ ಸ್ಥಿತಿಗೆ ಕಾರಣವಾಗಿರೋದು ಅವೈಜ್ಞಾನಿಕ ನಗರ ನಿರ್ಮಾಣ ಹಾಗೂ ದುಡ್ಡಿನಾಸೆಗೆ ಅಧಿಕಾರಿಗಳು ನಿಯಮ ಉಲ್ಲಂಘಿಸಿ ಫುಟಪಾತ್, ಚರಂಡಿ ಹಾಗೂ ರಾಜಕಾಲುವೆ ಮೇಲೆ ಮನೆ, ಅಫೀಸ್, ವಾಣಿಜ್ಯ ಸಂಕೀರ್ಣ ನಿರ್ಮಾಣಕ್ಕೆ ಅವಕಾಶ ಕಲ್ಪಿಸಿರೋದು, ಹೀಗಾಗಿ ಮೊದಲು ನಗರ ರಾಜಕಾಲುವೆ,ಚರಂಡಿ, ಪುಟ್ ಪಾತ್ ಒತ್ತುವರಿ ತೆರವು ಮಾಡಿ ನೀರು ಸರಾಗವಾಗಿ ಹರಿಯಲು ಅವಕಾಶ ಮಾಡಿಕೊಡುವಂತೆ ಅಧಿಕಾರಿಗಳಿಗೆ ಆದೇಶಿಸುತ್ತೆನೆ. ಅಷ್ಟೆ ಅಲ್ಲ ಆದೇಶ ಜಾರಿಯಾಗಿದ್ಯೋ ಇಲ್ವೋ ಎಂಬುದನ್ನು ಕಡ್ಡಾಯವಾಗಿ ಪಾಲೋ ಅಪ್ ಮಾಡುತ್ತೇನೆ. ಇದರಿಂದ ನಗರ ಚಿಕ್ಕಮಳೆಗೆ ಸಮುದ್ರದಂತಾಗೋದನ್ನು ತಪ್ಪಿಸಬಹುದು.
ಇನ್ನು ದೇಶದ ಮಟ್ಟದಲ್ಲಿ ರಾಜ್ಯಕ್ಕೆ ಅವಮಾನ ಆಗುವಂತೆ ಆದ ಕಸದ ಸಮಸ್ಯೆ ಬಗ್ಗೆ ನಾನು ಗಂಭೀರವಾಗಿ ಚಿಂತನೆ ನಡೆಸಿದ್ದೇನೆ. ಜನರಲ್ಲಿ ಹಸಿ ಕಸ ಮತ್ತು ಒಣ ಕಸ ವಿಂಗಡಣೆಯ ಮಹತ್ವವನ್ನು ಮನದಟ್ಟು ಮಾಡಿಸಲು ಕಾರ್ಯಕ್ರಮ ರೂಪಿಸಬೇಕು. ಕೇವಲ ಅಷ್ಟೇ ಅಲ್ಲ, ಮನೆಯಲ್ಲೇ ಹೂದೋಟ ಹೊಂದಿರುವ ಜನರಲ್ಲಿ ತಮ್ಮ ಮನೆಯ ಹಸಿಕಸಗಳನ್ನು ಬಳಸಿಕೊಂಡು ಗೊಬ್ಬರ ತಯಾರಿಸುವ ಕುರಿತು ತಿಳುವಳಿಕೆ ಮೂಡಿಸಬೇಕು. ಆಗ ಹಸಿಕಸವೊಂದು ಬಹುದೊಡ್ಡ ಸಮಸ್ಯೆಯಾಗುವುದನ್ನು ತಪ್ಪಿಸಬಹುದು. ಇನ್ನು ಒಣ ಕಸವನ್ನು ಕಡ್ಡಾಯವಾಗಿ ಸಂಗ್ರಹಿಸಿ ನೀಡುವುದನ್ನು ಜನರು ಪಾಲಿಸುವಂತೆ ನೋಡಿಕೊಳ್ಳಬೇಕು. ಇದರಿಂದ ಮನೆ-ಮನೆಗಳು , ರಸ್ತೆಗಳಲ್ಲಿ ಕಸದ ರಾಶಿ ತಪ್ಪಿಸಬಹುದು.
ವಾಣಿಜ್ಯ ಕಟ್ಟಡಗಳು ಹಾಗೂ ಅಂಗಡಿ ಮಾಲೀಕರು ತಮ್ಮ ಉದ್ಯೋಗದಿಂದ ಉತ್ಪತ್ತಿಯಾಗುವ ಕಸವನ್ನು ನಿರ್ವಹಿಸುವುದಕ್ಕಾಗಿ ಬಿಬಿಎಂಪಿಗೆ ತಿಂಗಳಿಗೊಮ್ಮೆ ಹಣ ಪಾವತಿಸುವ ಯೋಜನೆ ತರುತ್ತೇನೆ. ಇದರಿಂದ ನಗರದಲ್ಲಿ ಸಂಗ್ರಹವಾದ ಕಸಗಳನ್ನು ಊರಾಚೆ ಕೊಂಡೊಯ್ದು ಸಂಸ್ಕರಿಸಲು ಹಾಗೂ ಸಂಸ್ಕರಣೆಯ ಸಂಬಂಧ ಅಗತ್ಯವಾದ ವೆಚ್ಚದಾಯಕ ಯಂತ್ರಗಳ ಖರೀದಿಗೆ ಬಿಬಿಎಂಪಿ ನೆರವಾಗುತ್ತದೆ. ಇದರಿಂದ ವಿನಾಕಾರಣ ಬಿಬಿಎಂಪಿ ಕೋಟ್ಯಾಂತರ ರೂಪಾಯಿ ವೆಚ್ಚ ಮಾಡೋದನ್ನು ನಿಯಂತ್ರಿಸಬಹುದು.
ಇನ್ನೂ ನಗರದ ಹೊರವಲಯದಲ್ಲಿ ಕಸದ ನಿರ್ವಹಣೆಗಾಗಿ ಸೂಕ್ತ ವ್ಯವಸ್ಥೆ ಕಲ್ಪಿಸುವ ಯೋಜನೆ ತರಬೇಕು. ಅದರಿಂದ ನಗರದ ಸುತ್ತಮುತ್ತಲಿನ ಹಳ್ಳಿಯ ಜನರು ಸಮಸ್ಯೆಗೀಡಾಗುವುದನ್ನು ಹಾಗೂ ಬಿಬಿಎಂಪಿ ವಿರುದ್ಧ ಹೋರಾಟಕ್ಕೆ ಮುಂಧಾಗುವುದನ್ನು ತಪ್ಪಿಸಬಹುದು. ಅಲ್ಲಿ ಕಸದ ನಿವರ್ಹಣಾ ಘಟಕದ ಸುತ್ತ ಎತ್ತರದ ತಡೆಗೋಡೆ, ವಾಸನೆ ತಡೆಗೆ ಸೂಕ್ತ ತಂತ್ರಜ್ಞಾನ ಹಾಗೂ ಕಸದ ವೈಜ್ಞಾನಿಕ ನಿವರ್ಹಣೆ ಮಾಡಿಸಬೇಕು.
ಇನ್ನು ನಗರದ ರಸ್ತೆಗಳ ಮೇಲೆ ಕಾಮಗಾರಿ ಹೆಸರಿನಲ್ಲಿ ಸೃಷ್ಟಿಸುವ ಅವ್ಯವಸ್ಥೆಯನ್ನು ತಡೆಯಲು ಸ್ಪಷ್ಟವಾದ ನಿಯಮ ರೂಪಿಸಬೇಕು. ಆಯಾ ವಾರ್ಡ್ ಇಂಜಿನೀಯರ್ ಗೆ ಆ ಏರಿಯಾದ ರಸ್ತೆಗಳ ಸುರಕ್ಷತೆಯ ಹೊಣೆ ನೀಡಬೇಕು. ಜಲಮಂಡಳಿ, ಸೇರಿದಂತೆ ಯಾವುದೇ ಇಲಾಖೆಯವರು ತಮ್ಮ ಕೆಲಸಕ್ಕೆ ರಸ್ತೆ ಅಗೆದರೂ ಮತ್ತೆ ಅದನ್ನು ದುರಸ್ಥಿಗೊಳಿಸಿಕೊಡುವುದು ಕಡ್ಡಾಯ. ಆ ಕಾಮಗಾರಿಯ ಹೊಣೆ ಆಯಾ ವಾರ್ಡ್ ನ ಇಂಜಿನಿಯರ್ ಗೆ ನೀಡಬೇಕು. ಆಗ ಇಂಜೀನಿಯರ್-ಗಳು ತಮ್ಮ ಜವಾಬ್ದಾರಿಯಿಂದ ಕೆಲಸಮಾಡಿಸಲು ಮುಂದಾಗುತ್ತಾರೆ. ಇಲ್ಲದಿದ್ದರೇ ಮನಬಂದಂತೆ ರಸ್ತೆಯನ್ನು ಅಗೆದು ಹಾಕಲಾಗುತ್ತದೆ. ಇದರಿಂದ ರಸ್ತೆ ಪಕ್ಕದ ಗುಂಡಿಗೆ ಬಿದ್ದ ವಾಹನ ಸವಾರರು ಕೈಕಾಲು ಮುರಿದುಕೊಳ್ಳುವ ಸ್ಥಿತಿ ಎದುರಾಗುತ್ತದೆ.
ನಾನು ಮೇಯರ್ ಆದರೆ, ಇನ್ನೊಂದು ಅತ್ಯಂತ ಪ್ರಮುಖ ಅಂಶದ ಬಗ್ಗೆ ಗಮನ ಹರಿಸುತ್ತೇನೆ. ಅದು ಬೆಂಗಳೂರಿನ ಮರಗಳ ನಿರ್ವಹಣೆ. ಬೆಂಗಳೂರು ಉದ್ಯಾನ ನಗರಿ ಎಂದೇ ಹೆಸರು ಪಡೆದಿದ್ದರೂ ಈಗ ಮೊದಲಿನಷ್ಟು ಮರಗಳು ಉಳಿದಿಲ್ಲ. ಅದರಲ್ಲೂ ಉಳಿದಿರುವ ಮರಗಳು ನಿರ್ವಹಣೆಯ ಕೊರತೆಯಿಂದ ಸೊರಗಿವೆ. ಹೀಗಾಗಿ ಇತ್ತೀಚೆಗೆ ಸುರಿದ ಮಳೆಗೆ ಮರ ಬಿದ್ದು ಮೂವರನ್ನು ಬಲಿ ಪಡೆದುಕೊಂಡಿತ್ತು. ಹೀಗಾಗಿ ಮಳೆಗಾಲದ ಆರಂಭಕ್ಕೆ ಮುನ್ನವೇ ಮರಗಳ ಸ್ಥಿತಿ ಅಧ್ಯಯನ ನಡೆಸಿ ಒಣಗಿದ ಹಾಗೂ ಅಪಾಯಕ್ಕೆ ಆಹ್ವಾನ ನೀಡುತ್ತಿರುವ ಮರಗಳ ತೆರವಿಗೆ ಸೂಚನೆ ನೀಡುತ್ತೇನೆ. ಅಲ್ಲದೇ ನಗರದ ಪರಿಸರ ತಜ್ಞರ ಹಾಗೂ ವಿಜ್ಞಾನಿಗಳ ಸಲಹೆ ಪಡೆದು ಬೆಂಗಳೂರಿನ ವಾತಾವರಣ, ಮಣ್ಣು ಹಾಗೂ ವ್ಯವಸ್ಥೆಗೆ ಸರಿಹೊಂದುವ ಗಟ್ಟಿಯಾದ ಮರಗಳ ಸಸಿಗಳನ್ನು ನೆಡಲು ಶಿಫಾರಸ್ಸು ಮಾಡುತ್ತೇನೆ. ಯಾಕೆಂದರೇ ಈಗ ನಗರದಲ್ಲಿರುವ ಹಲವು ಜಾತಿಯ ಮರಗಳು ಪೊಳ್ಳು ಜಾತಿಯವಾಗಿದ್ದು ಅವಕ್ಕೆ ಗಾಳಿ ಹಾಗೂ ಮಳೆಯ ರಭಸ ತಡೆದುಕೊಳ್ಳುವ ಶಕ್ತಿ ಇಲ್ಲ.
ಇನ್ನು ಮರಗಳನ್ನು ಉಳಿಸಿಕೊಳ್ಳಲು ರಸ್ತೆ ಹಾಗೂ ಪುಟ್ ಪಾತ್ ಕಾಮಗಾರಿ ವೇಳೆ ರಸ್ತೆಬದಿಯ ಮರಗಳ ಬುಡದವರೆಗೆ ಕಾಂಕ್ರೀಟ್ ಹಾಕಿ ಸಿಮೆಂಟ್ ಕಟ್ಟೆ ಕಟ್ಟುವುದನ್ನು ನಿಲ್ಲಿಸಲು ಸೂಚಿಸುತ್ತೇನೆ. ಯಾಕೆಂದರೇ ಇದರಿಂದ ಮರದ ಬೇರಿಗೆ ಮಣ್ಣಿನ ಕೊರತೆ ಉಂಟಾಗಿ ಮರಗಳು ನೆಲಕ್ಕುರುಳುತ್ತವೆ. ಇನ್ನು ಇದರ ಜೊತೆಗೆ ನಗರದ ಅಂದ ಕಾಪಾಡಲು ಅಡ್ಡಿಯಾಗಿರುವ ಬ್ಯಾನರ್ ಹಾಗೂ ಬಂಟಿಂಗ್ಸ್ ಗಳ ನಿರ್ವಹಣೆ, ಓಎಫ್ಸಿ ಕೇಬಲ್ ಮಾಫಿಯಾ ನಿಯಂತ್ರಣಕ್ಕೆ ನಿಯಮ ರೂಪಿಸುತ್ತೇನೆ.
ಬಿಬಿಎಂಪಿ ವ್ಯಾಪ್ತಿಯ ಸರ್ಕಾರಿ ಶಾಲೆಗಳ ಮಕ್ಕಳ ಆರೋಗ್ಯ ಹಾಗೂ ಕೌಶಲ್ಯ ವೃದ್ಧಿಗೆ ಇನ್ನಷ್ಟು ಯೋಜನೆಗಳನ್ನು ರೂಪಿಸಬೇಕು. ಮಕ್ಕಳ ಉತ್ತಮ ಮಾನಸಿಕ ಹಾಗೂ ದೈಹಿಕ ಆರೋಗ್ಯಕ್ಕಾಗಿ ಯೋಗ ಕಡ್ಡಾಯಗೊಳಿಸುವುದು, ಮಕ್ಕಳಲ್ಲಿ ಸ್ವಂತ ಉದ್ದಿಮೆ ಸ್ಥಾಪಿಸುವ ಕುರಿತು ತರಬೇತಿ, ರಾಷ್ಟ್ರಪ್ರೇಮ ಬೆಳೆಸುವಂತಹ ಕಾರ್ಯಕ್ರಮಗಳ ಆಯೋಜನೆಗೆ ಸೂಚಿಸುತ್ತೇನೆ.
ಇನ್ನು ಈ ಎಲ್ಲ ಕಾರ್ಯಕ್ರಮಗಳು ಈಗಾಗಲೇ ನಗರದಲ್ಲಿ ಅಸ್ತಿತ್ವದಲ್ಲಿರಬಹುದು. ಮತ್ತು ಇದುವರೆಗೂ ಈ ವಿಶಾಲ ಬೆಂಗಳೂರನ್ನು ಆಳಿದ ಎಲ್ಲ ಬಿಬಿಎಂಪಿ ಮೇಯರ್ ಗಳು ಇವೆಲ್ಲ ಕಾರ್ಯವನ್ನು ಮಾಡಿರಬಹುದು. ಆದರೆ ನಾನು ಮೇಯರ್ ಆದರೆ ಯಾವ ಮೇಯರ್ ಕೂಡಾ ಮಾಡಿರದ ಕೆಲಸವೊಂದನ್ನು ಮಾಡಬಯಸುತ್ತೇನೆ. ಅದುವೇ ಜನತಾ ದರ್ಶನ.
ಹೌದು, ಸಿಎಂ ಮಾದರಿಯಲ್ಲಿ ಪಕ್ಷಬೇಧವಿಲ್ಲದೇ ನಗರದ ಎಲ್ಲ ವಾರ್ಡ್ ನಲ್ಲೂ ತಿಂಗಳಿಗೊಮ್ಮೆ ಜನತಾ ದರ್ಶನ ಮಾಡುತ್ತೇನೆ. ಇದರಿಂದ ಪ್ರತಿಯೊಂದು ವಾರ್ಡ್ ನ ಜನರ ಸಮಸ್ಯೆಗಳನ್ನು ಅರಿಯಲು ಹಾಗೂ ಬಗೆಹರಿಸಲು ಸಾಧ್ಯವಾಗುತ್ತದೆ. ಅಲ್ಲದೇ ಬಿಬಿಎಂಪಿ ಅಧಿಕಾರಿಗಳ ಕಾರ್ಯದಕ್ಷತೆ ಕೂಡಾ ತಿಳಿಯಬಹುದು. ಜನರು ಹೇಗಿದ್ದಾರೆ, ಯಾವ ರೀತಿಯ ಸಮಸ್ಯೆ ಎದುರಿಸುತ್ತಿದ್ದಾರೆ? ನೀರಿನ ಪೂರೈಕೆ ಸಮರ್ಪಕವಾಗಿದ್ಯಾ? ಜನರ ಭದ್ರತೆ ಹೇಗಿದೆ? ಹೀಗೆ ಎಲ್ಲ ರೀತಿಯ ಸಮಸ್ಯೆಗಳನ್ನು ಅರಿತುಕೊಂಡು ಪರಿಹಾರ ಒದಗಿಸಲು ಈ ಜನತಾ ದರ್ಶನ ನೆರವಾಗುತ್ತದೆ. ಜನರು ನೇರವಾಗಿ ಮೇಯರ್ ಜೊತೆ ತಮ್ಮ ಸಂಕಷ್ಟಗಳನ್ನು ಹಂಚಿಕೊಂಡು ಪರಿಹಾರ ಪಡೆದುಕೊಳ್ಳಲು ಇದು ನೆರವಾಗುತ್ತದೆ. ಅಲ್ಲದೇ ಒಬ್ಬ ಮೇಯರ್ ಜನಸಾಮಾನ್ಯರ ಎದುರು ನಿಂತು ಸಮಸ್ಯೆಗಳನ್ನು ಆಲಿಸುವುದರಿಂದ ಹಾಗೂ ಜನರ ಜೊತೆ ಒಡನಾಡುವುದರಿಂದ ಯೋಜನೆಗಳ ಯಶಸ್ಸು, ನಗರದ ಜನರ ಸಮಸ್ಯೆ ಹಾಗೂ ತಮ್ಮ ಆಡಳಿತದ ವಿಮರ್ಶೆ ಎಲ್ಲವೂ ಒಮ್ಮೆಲೆ ಲಭ್ಯವಾಗುತ್ತದೆ. ಹೀಗಾಗಿ ನಾನು ಮೇಯರ್ ಆದರೇ ಕಡ್ಡಾಯ ಜನತಾ ದರ್ಶನ ಆರಂಭಿಸುತ್ತೇನೆ.
ಬೆಂಗಳೂರು ಎಂಬುದು ಪ್ರತಿನಿತ್ಯ ಬೆಳೆಯುತ್ತಲೇ ಇರುವ ಒಂದು ಮಾಯಾಲೋಕದಂತ ನಗರ. ಹೀಗಾಗಿ ಇಲ್ಲಿಯ ಸರ್ವಾಂಗೀಣ ಅಭಿವೃದ್ಧಿ ಅತ್ಯಂತ ಸವಾಲಿನ ಕೆಲಸ. ಹೀಗಾಗಿ ನಾನು ಮೇಯರ್ ಆಗಿದ್ದರೆ ಎಂಬ ಕಲ್ಪನೆ ಅತ್ಯಂತ ವಿಶಾಲ ಮಜಲುಗಳನ್ನು ಹೊಂದಿದೆ. ಯಾಕೆಂದರೆ ನಗರದ ಪ್ರಥಮ ಪ್ರಜೆಯಾಗಿ ಮೇಯರ್ ಹೊಣೆಗಾರಿಕೆ ಅತ್ಯಂತ ಹಿರಿದಾದದ್ದು. ಆದರೇ ಎಲ್ಲ ಅಭಿವೃದ್ಧಿ ಸಾಧನೆ ಹಾಗೂ ಸುವ್ಯವಸ್ಥೆಯ ಮೂಲ ಸುಂದರ, ಸುಭಿಕ್ಷ ಹಾಗೂ ಮೂಲಭೂತ ಸೌಲಭ್ಯಗಳನ್ನು ಹೊಂದಿದ ನಗರ. ಹೀಗಾಗಿ ನಾನು ಮೇಯರ್ ಆದರೆ ನೀರು, ಒಳಚರಂಡಿ, ಸ್ವಚ್ಛತೆ ಹಾಗೂ ಭದ್ರತೆಗೆ ಹೆಚ್ಚಿನ ಆದ್ಯತೆ ನೀಡುತ್ತೇನೆ. ಆ ಮೂಲಕ ಬೆಂಗಳೂರಿನ ಮಾನ್ಯತೆಯನ್ನು ಎಲ್ಲೆಡೆ ಹೆಚ್ಚಿಸಬಹುದು ಹಾಗೂ ಜನರು ನೆಮ್ಮದಿಯಿಂದ ಬದುಕುವಂತ ಸ್ಥಿತಿ ನಿರ್ಮಿಸಬಹುದು ಎಂಬುದು ನನ್ನ ನಂಬಿಕೆ.
Note: This is a shortlisted entry in Kannada category, from our contest, ‘If I were the Mayor’ launched in Bengaluru recently.