Translated by Madhusudhan Rao
ಬೆಂಗಳೂರಿನಲ್ಲಿ ಎಲ್ಲರೂ ರಸ್ತೆಗಳಲ್ಲಿನ ಕಸದ ರಾಶಿಯನ್ನು ನೋಡಿ ಅಸಹ್ಯಿಸಿಕೊಳ್ಳುವವರೇ. ಬಿಬಿಎಂಪಿ ತ್ಯಾಜ್ಯವನ್ನು ವಿಲೇವಾರಿ ಮಾಡಿದ ನಂತರ ಎಲ್ಲರೂ ನೆಮ್ಮದಿಯ ನಿಟ್ಟುಸಿರು ಬಿಡುತ್ತಾರೆ. ಆದರೆ ಕಸ ಎಲ್ಲಿಗೆ ಹೋಗುತ್ತದೆ?
ಸರ್ಕಾರ ಬೆಂಗಳೂರಿನ ಕಸದ ದುಃಸ್ಥಿತಿ ಸರಿಪಡಿಸಲು ಒಂದು ಧಿಡೀರ್ ಪರಿಹಾರ ಸೂಚಿಸಿದೆ – ದಿನಕ್ಕೆ ಒಟ್ಟು 2100 ಟನ್ ತ್ಯಾಜ್ಯವನ್ನು ನಿರ್ವಹಿಸುವ ಸಾಮರ್ಥ್ಯ ಹೊಂದಿರುವ ಐದು ಕಸದಿಂದ ವಿದ್ಯುತ್ ತಯಾರಿಸುವ (“ವೇಸ್ಟ್-ಟು-ಎನರ್ಜಿ” ಅಥವಾ ಡಬ್ಲ್ಯೂಟಿಈ / WtE) ಘಟಕಗಳು.
ಅನೇಕರು ಅಂದುಕೊಳ್ಳಬಹುದು – ವಾಹ್, ಕಸದಿಂದ ವಿದ್ಯುತ್! ಎಂಥ ಅದ್ಭುತ ಪರಿಕಲ್ಪನೆ! ಒಂದೇ ಏಟಿಗೆ ಎರಡು ಹಕ್ಕಿ ಹೊಡೆದ ಹಾಗೆ!
ಆದರೆ ಇದು ಖಂಡಿತ ತಪ್ಪು. ಇದಕ್ಕೆ ಐದು ಕಾರಣಗಳು ಇಲ್ಲಿವೆ:
-
ಭಾರತದಲ್ಲಿ ಉತ್ಪತ್ತಿಯಾಗುವ ತ್ಯಾಜ್ಯಕ್ಕೆ ಡಬ್ಲ್ಯುಟಿಈ ಘಟಕಗಳು ಸೂಕ್ತವಲ್ಲ
“ಆದ್ರೆ ಸ್ವೀಡನ್, ಸಿಂಗಪುರ್ ಮತ್ತು ಜಪಾನ್ ಗಳಲ್ಲಿರುವ ಡಬ್ಲ್ಯುಟಿಈ ಘಟಕಗಳನ್ನು ವಾಟ್ಸಾಪ್ಪ್ ವಿಡಿಯೋನಲ್ಲಿ ನಾನು ನೋಡಿದೀನಿ – ಈ ದೇಶಗಳಂತೆಯೇ ಆಧುನಿಕ ತಂತ್ರಜ್ಞಾನವನ್ನು ನಾವೂ ಏಕೆ ಅಳವಡಿಸಿಕೊಳ್ಳಲು ಸಾಧ್ಯವಿಲ್ಲ?”
ಡಬ್ಲ್ಯುಟಿಈ ಘಟಕಗಳಿಗೆ ವಿದ್ಯುತ್ ಉತ್ಪಾದಿಸಲು ಹೆಚ್ಚಿನ ಕ್ಯಾಲೋರಿಫಿಕ್ ಅಂಶ ಮತ್ತು ಕಡಿಮೆ ತೇವಾಂಶದ ತ್ಯಾಜ್ಯ ನೀಡಬೇಕಾಗುತ್ತದೆ. ಘನತ್ಯಾಜ್ಯ ನಿರ್ವಹಣೆ (ಸಾಲಿಡ್ ವೇಸ್ಟ್ ಮ್ಯಾನೇಜ್ಮೆಂಟ್ – ಎಸ್.ಡಬ್ಲ್ಯು.ಎಂ) ನಿಯಮಗಳು, 2016 ರ ಪ್ರಕಾರ ಕೊಳೆಯದಿರುವಂತಹ, ಮರುಬಳಕೆ ಮಾಡಲಾಗದ ತ್ಯಾಜ್ಯವನ್ನು ಮಾತ್ರ ಈ ಘಟಕಗಳಿಗೆ ಕಳುಹಿಸಬೇಕು. ಇದರಲ್ಲಿ ಮರುಬಳಕೆ ಮಾಡಲಾಗದ ಪ್ಲಾಸ್ಟಿಕ್, ಪಾಲಿಮರ್‌ಗಳು ಇತ್ಯಾದಿಗಳನ್ನು ಮಾತ್ರ ಒಳಗೊಂಡಿರುತ್ತದೆ. ಅಂದರೆ, ಘಟಕಗಳಲ್ಲಿ ಬಳಸುವ ತ್ಯಾಜ್ಯವು 4500 ಕಿ.ಕ್ಯಾಲ್ / ಕಿ.ಡಬ್ಲ್ಯೂಎಚ್ ಸುಡುವಿಕೆ ಮತ್ತು 2500 ಕಿ.ಕ್ಯಾಲ್ / ಕೆಜಿ ಕ್ಯಾಲೊರಿಫಿಕ್ ಅಂಶವನ್ನು ಹೊಂದಿರಬೇಕು.
ಆದರೆ ಭಾರತದಲ್ಲಿ, ಮಿಶ್ರ ತ್ಯಾಜ್ಯವನ್ನು ಡಬ್ಲ್ಯುಟಿಈ ಘಟಕಗಳಿಗೆ ಕಳುಹಿಸಲಾಗುತ್ತದೆ. ಅಲ್ಲದೆ, ಈ ಮಿಶ್ರ ತ್ಯಾಜ್ಯವು (ಜಡ (inert) ವಾದದ್ದನ್ನು ಹೊರತಾಗಿಸಿ) ಹೆಚ್ಚಿನ ತರಕಾರಿ ಮತ್ತು ತೇವದ ತ್ಯಾಜ್ಯವನ್ನು ಹೊಂದಿದೆ – ಸುಮಾರು 60-70 ಪ್ರತಿಶತದಷ್ಟು. ಕೊಳೆಯದಿರುವ, ಮರುಬಳಕೆ ಮಾಡಲಾಗದ ತ್ಯಾಜ್ಯವು ಮಿಶ್ರ ತ್ಯಾಜ್ಯದ ಶೇಕಡಾ 10 ಕ್ಕಿಂತ ಕಡಿಮೆ ಬರುತ್ತದೆ.
ಅಂತಹ ಸಂದರ್ಭದಲ್ಲಿ, ಕ್ಯಾಲೊರಿಫಿಕ್ ಅಂಶವು 2500 ಕಿ.ಕ್ಯಾಲ್ / ಕೆಜಿ ಇರಬೇಕಾದ ಕಡೆ ಕೇವಲ 1100-1500 ಕಿ.ಕ್ಯಾಲ್ / ಕೆಜಿ ಆಗಿರುತ್ತದೆ!
ಇದಲ್ಲದೆ, ಕಸವು ವಿಂಗಡನೆ ಆಗದ ರೂಪದಲ್ಲಿದ್ದು, ತೇವಾಂಶ ಅತಿ ಹೆಚ್ಚಿರುವ ಕಾರಣ ಅದು ಸುಡಲು ಸೂಕ್ತವಾಗಿರೋಲ್ಲ. ಸುಡಲು ಹೆಚ್ಚುವರಿ ಇಂಧನ ಬೇಕಾಗುತ್ತದೆ ಆದ್ದರಿಂದ, ವಿದ್ಯುತ್ ಉತ್ಪಾದನೆಯೇ ನಿಷ್ಫಲವಾಗುತ್ತೆ.
-
ಡಬ್ಲ್ಯುಟಿಈ ಘಟಕಗಳು ಆರ್ಥಿಕವಾಗಿ ಲಾಭದಾಯಕವಲ್ಲ
ಭಾರತದಲ್ಲಿ ತ್ಯಾಜ್ಯದ ಸಂಯೋಜನೆಯಿಂದಾಗಿ, ಈ ಘಟಕಗಳು 2500 ಕಿ.ಕ್ಯಾಲ್ / ಕೆಜಿ ಗೆ ಬದಲು 1100-1500 ಕಿ.ಕ್ಯಾಲ್ / ಕೆಜಿಯ ಮಿಶ್ರ ತ್ಯಾಜ್ಯವನ್ನು ಸುಡುತ್ತವೆ. ನಮ್ಮ ವಿಶ್ಲೇಷಣೆಯ ಪ್ರಕಾರ, ಈ ಸನ್ನಿವೇಶದಲ್ಲಿ, ಉತ್ಪಾದಿತ ವಿದ್ಯುತ್ ನಿರೀಕ್ಷೆಗಿಂತ ಮೂರರಲ್ಲಿ ಒಂದು ಭಾಗಕ್ಕಿಂತಲೂ ಎಷ್ಟೋ ಕಡಿಮೆಯಿರುತ್ತದೆ (ತ್ಯಾಜ್ಯದ ಕ್ಯಾಲೊರಿಫಿಕ್ ಅಂಶದಲ್ಲಿನ ಬದಲಾವಣೆಗಳು, ಶಾಖದ ದರ ಮತ್ತು ತ್ಯಾಜ್ಯವನ್ನು ಸುಡಲು ಬೇಕಾದ ಹೆಚ್ಚುವರಿ ಶಕ್ತಿಯ ಕಾರಣಗಳಿಂದಾಗಿ).
ಆದ್ದರಿಂದ 50 ವರ್ಷ ಕಳೆದರೂ ಬಂಡವಾಳ ಹೂಡಿಕೆಯನ್ನು ಮರುಪಡೆಯಲಾಗುವುದಿಲ್ಲ. ಇದು ಘಟಕಗಳನ್ನು ಆರ್ಥಿಕವಾಗಿ ಅಶಕ್ತಗೊಳಿಸುತ್ತದೆ; ಮತ್ತು ಘಟಕಗಳಲ್ಲಿ ಮಿಶ್ರ ತ್ಯಾಜ್ಯದ ಬಳಕೆಯು ಎಸ್.ಡಬ್ಲ್ಯು.ಎಂ 2016 ರ ನಿಯಮಗಳ ಮೂಲ ಸಿದ್ಧಾಂತಗಳನ್ನು ಉಲ್ಲಂಘಿಸುತ್ತದೆ.
ಡೆಕ್ಕನ್ ಹೆರಾಲ್ಡ್ ನಲ್ಲಿ ಸೆಪ್ಟೆಂಬರ್ ನಲ್ಲಿ ಪ್ರಕಟವಾದ ಒಂದು ವರದಿಯ ಪ್ರಕಾರ ಬಿಬಿಎಂಪಿ “ಒಂದು ದಿನಕ್ಕೆ ಒಟ್ಟಾರೆ 2100 ಟನ್ ಕಸವನ್ನು ಸಂಸ್ಕರಿಸುವ ಸಾಮರ್ಥ್ಯ ಇರುವ” ಐದು ಘಟಕಗಳನ್ನು ಪ್ರಸ್ತಾಪಿಸಿದೆ. ಬೆಂಗಳೂರಿನ ದಿನದ ಒಟ್ಟು ತ್ಯಾಜ್ಯ ಉತ್ಪತ್ತಿಯ ದೃಷ್ಟಿಯಿಂದ ನೋಡಿದರೆ, ಅದು ದಿನಕ್ಕೆ ಸುಮಾರು 5000 ಟನ್ ಎಂದು ಅಂದಾಜಿಸಲಾಗಿದೆ.
ವಾದದ ಸಲುವಾಗಿ, ಘಟಕಗಳು ಹೆಚ್ಚು ಕ್ಯಾಲೋರಿಫಿಕ್ ಆಂಶವಿರುವ, ಕೊಳೆಯದಿರುವ, ಮರುಬಳಕೆ ಮಾಡಲಾಗದ ತ್ಯಾಜ್ಯವನ್ನು ಮಾತ್ರ ಸುಡುತ್ತವೆ ಎಂದು ಅಂದುಕೊಳ್ಳೋಣ. ಅಂಥದು ಒಟ್ಟು ತ್ಯಾಜ್ಯದ ಕೇವಲ 10 ಪ್ರತಿಶತದಷ್ಟಿರುತ್ತದೆ.
ಇದರರ್ಥ ದಿನಕ್ಕೆ 5000 ಟನ್ ಉತ್ಪಾದಿಸುವ ಬೆಂಗಳೂರಿನಂತಹ ನಗರಕ್ಕೆ, ಸುಡಬಹುದಾದ ಭಾಗವು ದಿನಕ್ಕೆ 500 ಟನ್ ಮಾತ್ರ, ಅದೂ ಸಂಪೂರ್ಣವಾಗಿ ವಿಂಗಡಿಸಿದಾಗ. ಹೀಗಿದ್ದಾಗ ಸರ್ಕಾರವು ಡಬ್ಲ್ಯುಟಿಈಗಾಗಿ 5 ಘಟಕಗಳ ಮೂಲಕ 2100 ಟನ್ ಸಾಮರ್ಥ್ಯವನ್ನು ಏಕೆ ಪ್ರಸ್ತಾಪಿಸುತ್ತಿದೆ ಎಂಬುದು ಅರ್ಥವಾಗದ ವಿಷಯ.
ಮಂಡೂರು ಕ್ವಾರಿಗೆ ಕಸ ಸಾಗಿಸುತ್ತಿರುವ ಟ್ರಕ್‌ಗಳು (2012). ಚಿತ್ರ: ಆನಂದ್ ಯದ್ವಾಡ್ಒಂದು ವೇಳೆ ಈ ಘಟಕಗಳು ಒಟ್ಟಾರೆಯಾಗಿ 2100 ಟನ್ ತ್ಯಾಜ್ಯವನ್ನು ಸಂಸ್ಕರಿಸುತ್ತವೆ ಮತ್ತು ಕೇವಲ 10 ಪ್ರತಿಶತದಷ್ಟು ಬೇರ್ಪಡಿಸಿದ ಪ್ಲಾಸ್ಟಿಕ್ ಭಾಗವನ್ನು ಮಾತ್ರ ಸುಡಲಾಗುತ್ತದೆ ಎಂದು ಭಾವಿಸೋಣ. ಆ 210 ಟನ್ ಬೇರ್ಪಡಿಸಿದ ತ್ಯಾಜ್ಯವು ಹೆಚ್ಚಿನ ಮೌಲ್ಯದ ಪ್ಲಾಸ್ಟಿಕ್ ಅನ್ನು ಒಳಗೊಂಡಿರುತ್ತದೆ ಎಂದೇ ಪರಿಗಣಿಸಿದರೆ ಅದು 8000 ಕಿ.ಕ್ಯಾಲ್ / ಕೆಜಿ ಕ್ಯಾಲೊರಿಫಿಕ್ ಅಂಶವಾದೀತು. ಅಂಥ ಸಂದರ್ಭದಲ್ಲೂ, ಎಲ್ಲಾ ಐದು ಘಟಕಗಳು ಸೇರಿ ಕೇವಲ 20 ಮೆಗಾವ್ಯಾಟ್ ವಿದ್ಯುತ್ ಉತ್ಪಾದಿಸಬಹುದು. ಆದರೆ ಬಿಬಿಎಂಪಿಯ ಪ್ರಸ್ತಾವಿತ ಘಟಕಗಳು 60 ಮೆಗಾವ್ಯಾಟ್‌ಗಿಂತ ಹೆಚ್ಚು ವಿದ್ಯುತ್ ಉತ್ಪಾದಿಸಬೇಕಿದೆ.
ಸಬ್ಸಿಡಿಗಳನ್ನು ನೀಡಿದ ನಂತರವೂ ಡಬ್ಲ್ಯುಟಿಈ ಘಟಕಗಳು ಉತ್ಪಾದಿಸುವ ವಿದ್ಯುತ್ ದುಬಾರಿ ಕೂಡ ಆಗುವುದು. ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗವು (ಕೆ ಇ ಆರ್ ಸಿ) ಡಬ್ಲ್ಯೂಟಿಈ ಘಟಕದಿಂದ ಉತ್ಪತ್ತಿ ಆಗುವ ಪ್ರತಿ ಯೂನಿಟ್ ವಿದ್ಯುತ್ತಿಗೆ ರೂ.7.08 ಎಂದು ದರ ನಿಗದಿ ಮಾಡಿದೆ. (ಭಾರತದಲ್ಲಿ ವಿತರಣೆ ಕಂಪನಿಗಳು ಸರಾಸರಿ ಕೊಡುವ ದರ – ಉಷ್ಣ ವಿದ್ಯುತ್ (ಥರ್ಮಲ್ ಪವರ್) ಗೆ ಕೇವಲ 3.5 ರೂಪಾಯಿ ಮತ್ತು ನವೀಕರಿಸಬಲ್ಲ ಶಕ್ತಿ (ರಿನ್ಯೂವಬಲ್ ಎನರ್ಜಿ) ಗೆ ಕೇವಲ 2.5-3 ರೂಪಾಯಿ.) ಈ ಹೆಚ್ಚಿನ ದರ ನೀಡಿದ ಮೇಲೂ ಈ ಘಟಕಗಳು ಆರ್ಥಿಕ ದಿವಾಳಿತನಕ್ಕೆ ಕುಸಿದು ಬೀಳುತ್ತವೆ.
ಡಬ್ಲ್ಯುಟಿಈ ಕಂಪನಿಗಳಿಗೋಸ್ಕರ ಘಟಕಗಳನ್ನು ಆರ್ಥಿಕವಾಗಿ ಲಾಭದಾಯಕವಾಗಿಸಲು ಕರ್ನಾಟಕ ಸರ್ಕಾರದ ಯೋಜನೆ ಏನು? ಟಿಪ್ಪಿಂಗ್ ಶುಲ್ಕವನ್ನು ಜಾರಿ ಗೊಳಿಸುವುದರಿಂದಲೇ? ಇದು ಘಟಕಗಳಿಗೆ ಹೆಚ್ಚಿನ ಪ್ರಮಾಣದ ತ್ಯಾಜ್ಯವನ್ನು ಪೂರೈಸಲು ಕಸ ಗುತ್ತಿಗೆದಾರರಿಗೆ ನೀಡುವ ಪ್ರೋತ್ಸಾಹ.
ಇದರಿಂದ ಘಟಕಗಳು ಹೆಚ್ಚು ತ್ಯಾಜ್ಯವನ್ನು ಪಡೆಯುತ್ತಿರಬಹುದು, ಆದರೆ ಗುಣಮಟ್ಟ ಕಳಪೆಯಾಗಬಹುದು. ಕಡಿಮೆ ಗುಣಮಟ್ಟದ ಮತ್ತು ಜಡ ತ್ಯಾಜ್ಯ ವಸ್ತುಗಳು ನಂತರ ಘಟಕದ ಆವರಣದಲ್ಲಿ ತಿಪ್ಪೆ ಗುಂಡಿಗಳಾಗುತ್ತವೆ.
ಹೀಗಿದ್ದಲ್ಲಿ, ಬಿಬಿಎಂಪಿ ಸಹಿ ಹಾಕುತ್ತಿರುವ ಒಪ್ಪಂದಗಳ ಪ್ರಕಾರ ಮುಂದಿನ 30 ವರ್ಷಗಳವರೆಗೆ ಈ ಘಟಕಗಳನ್ನು ನಡೆಸುತ್ತಿರಬೇಕೆಂದರೆ, ನಗರವು ವಿದ್ಯುತ್ ಶುಲ್ಕ ಅಥವಾ ಟಿಪ್ಪಿಂಗ್ ಶುಲ್ಕಗಳ ಮೂಲಕ ಭಾರಿ ಬೆಲೆ ತೆರಬೇಕಾಗುತ್ತದೆ (ಪ್ರಸ್ತುತ ಒಪ್ಪಂದದಲ್ಲಿ ಟಿಪ್ಪಿಂಗ್ ಶುಲ್ಕವನ್ನು ಉಲ್ಲೇಖಿಸಲಾಗಿಲ್ಲ).
ಪ್ರಾಯಶಃ ನಮ್ಮ ನಗರವು ಇಂತಹ ದೈತ್ಯ ಘಟಕಗಳಿಂದ ದಿವಾಳಿಯಾದ ಪಾಶ್ಚಾತ್ಯದ ಹಲವಾರು ನಗರಗಳನ್ನು ಅನುಸರಿಸಬಹುದು ಅಥವಾ ಬಲವಂತವಾಗಿ ತ್ಯಾಜ್ಯವನ್ನು ಆಮದು ಮಾಡಿಕೊಳ್ಳುವ ಸ್ಥಿತಿಗೆ ಬರಬಹುದು! ಯಾವುದು ಹೀನ ಸ್ಥಿತಿ ಎಂದು ಯಾರಾದರೂ ಊಹಿಸಬಹುದು.
-
ಡಬ್ಲ್ಯುಟಿಈ ಘಟಕಗಳು ಅತಿ ಹೆಚ್ಚು ಮಾಲಿನ್ಯವನ್ನುಂಟುಮಾಡುತ್ತವೆ
ಹಲವು ತರಹದ ತ್ಯಾಜ್ಯಗಳನ್ನು ಸುಡುವುದು ಡೈಆಕ್ಸಿನ್, ಫ್ಯೂರನ್ಸ್ ಮತ್ತು ಅನ್ಯ ಹೆವಿ ಮೆಟಲ್ ಗಳಂಥ ಮಲಿನಕಾರಕಗಳನ್ನು ವಾತಾವರಣಕ್ಕೆ ಬಿಡುಗಡೆ ಮಾಡುತ್ತದೆ. ಇದು ಇನ್ನೂ ದೊಡ್ಡ ಸಮಸ್ಯೆ ಸೃಷ್ಟಿಸುವುದರ ಒಂದು ನಿದರ್ಶನ. ಈ ಡಬ್ಲ್ಯುಟಿಈ ಘಟಕಗಳಿಂದ ಉಂಟಾದ ವಿಷಭರಿತ ಭಸ್ಮವನ್ನು ಹೇಗೆ ನಿಯಂತ್ರಿಸುವುದು?
ದುರದೃಷ್ಟವಶಾತ್, ದೆಹಲಿಯ ಓಖ್ಲಾ ಘಟಕದ ಸನ್ನಿವೇಶದಲ್ಲಿ ನಾವು ನೋಡಿದಂತೆ, ಭಸ್ಮವನ್ನು ಬೇಕಾಬಿಟ್ಟಿಯಾಗಿ ಬಿಸಾಡಲಾಗಿ, ಚಿಂದಿ ಆಯುವವರು ಅದರಲ್ಲಿ ಏನಾದರೂ ಉಪಯೋಗದ್ದು ಸಿಕ್ಕೀತೆಂದು ಹೆಕ್ಕುತ್ತಿರುತ್ತಾರೆ. ಇದು ಅವರ ಆರೋಗ್ಯಕ್ಕೆ ತೀವ್ರ ಕೆಡುಕು ಉಂಟು ಮಾಡಬಹುದು.
Constant regular pouring of toxic pollutants during severe category status by Okhla w2e plant makes citizen suffer from asthma n other bronchial diseases shortening life and daily life miserable @HardeepSPuri @PrakashJavdekar @drharshvardhan @narendramodi Sir plz shut the plant. pic.twitter.com/OGWfvogF3C
— URJA (@URJADelhi) December 13, 2019
ಭಾರತದಂತಹ ಜನನಿಬಿಡ ದೇಶದಲ್ಲಿ, ಮಾಲಿನ್ಯ ನಿಯಂತ್ರಣ ನಿಯಮಗಳು ಕಡಿಮೆ ಜನಸಂಖ್ಯೆ ಹೊಂದಿರುವ ನಾರ್ಡಿಕ್ ದೇಶಗಳಿಗೆ ಹೋಲಿಸಿದರೆ ಹೆಚ್ಚು ಕಠಿಣವಾಗಿರಬೇಕು. ಆದರೆ ನಮ್ಮ ಮಾಲಿನ್ಯ ನಿಯಂತ್ರಣ ನಿಯಮಗಳು ಯುರೋಪಿಯನ್ ಒಕ್ಕೂಟಕ್ಕೆ ಹೋಲಿಸಿದರೆ ಗಮನಾರ್ಹವಾಗಿ ಸಡಿಲವಾಗಿವೆ.
ನನ್ನೊಂದಿಗಿನ ಇಮೇಲ್ ಸಂಭಾಷಣೆಯಲ್ಲಿ , ಸೆಂಟರ್ ಫಾರ್ ಸೈನ್ಸ್ ಅಂಡ್ ಎನ್ವಿರಾನ್ಮೆಂಟ್ (ಸಿಎಸ್ಈ) ನ ಕಾರ್ಯಕ್ರಮ ವ್ಯವಸ್ಥಾಪಕಿ ಸ್ವಾತಿ ಸಾಂಬ್ಯಾಲ್ ಹೇಳುತ್ತಾರೆ, “ದೇಶಾದ್ಯಂತದ ನಮ್ಮ ಅನುಭವವು ಈ ಘಟಕಗಳು ಪರಿಸರ ಮಾನದಂಡಗಳನ್ನು ಅನುಸರಿಸಲು ಸಾಧ್ಯವಾಗುತ್ತಿಲ್ಲ ಎಂದು ಸೂಚಿಸುತ್ತದೆ. ಇದಕ್ಕೆ ಕಾರಣ, ತ್ಯಾಜ್ಯ ಬೇರೆ ಬೇರೆ ರೀತಿಯ ಮತ್ತು ಕಳಪೆ ಗುಣಮಟ್ಟದ್ದಾಗಿದ್ದು, ಘಟಕಗಳು ಸರಿಯಾಗಿ ತ್ಯಾಜ್ಯ ಸುಡಲು ಸಾಧ್ಯವಾಗುವುದಿಲ್ಲ.”
ಈ ಘಟಕಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಮಿಶ್ರ ತ್ಯಾಜ್ಯವನ್ನು ನಿರ್ವಹಿಸುವುದರಿಂದ ಚೊಕ್ಕವಾಗಿಡುವುದು ಕಷ್ಟಕರವಾಗುತ್ತೆ ಎಂದು ಅವರು ಹೇಳಿದರು. ಇದು ದುರ್ವಾಸನೆ ಮತ್ತು ದೃಷ್ಟಿ ಮಾಲಿನ್ಯಕ್ಕೆ ಕಾರಣವಾಗುತ್ತದೆ. “ಅಲ್ಲದೆ, ಡಬ್ಲ್ಯುಟಿಈ ಘಟಕಗಳು ಶೇಕಡಾ 30-40ರಷ್ಟು ತ್ಯಾಜ್ಯವನ್ನು ತಿರಸ್ಕರಿಸಬೇಕಾಗಿ, ಅವನ್ನು ತಿಪ್ಪೆ ಗುಂಡಿಗೆ ಎಸೆಯುತ್ತವೆ ಏಕೆಂದರೆ ಅದು ಜಡ ಅಥವಾ ಸುಡಲಾಗದಷ್ಟು ಕಳಪೆಯಾಗಿರುತ್ತೆ” ಎಂದು ಅವರು ಹೇಳಿದರು.
-
ಡಬ್ಲ್ಯುಟಿಈ ಘಟಕಗಳು ಭಾರತದಲ್ಲಿ ಸತತವಾಗಿ ವಿಫಲವಾಗಿವೆ
ಸಿಎಸ್ಇ ನ 2018 ವರದಿ ‘ಟು ಬರ್ನ್ ಆರ್ ನಾಟ್ ಟು ಬರ್ನ್’ ದೇಶದಲ್ಲಿ ಡಬ್ಲ್ಯುಟಿಈ ಘಟಕಗಳ ವೈಫಲ್ಯ ತೋರಿಸುತ್ತದೆ. ವರದಿಯ ಸಹ ಲೇಖಕಿ ಆಗಿದ್ದ ಸ್ವಾತಿ ಅವರ ಪ್ರಕಾರ, “1987 ರಿಂದ ದೆಹಲಿಯ ತಿಮಾರ್‌ಪುರದಲ್ಲಿ ಮೊದಲ ಡಬ್ಲ್ಯುಟಿಇ ಬಂದಾಗಲಿಂದ ಸ್ಥಾಪಿಸಲಾದ 14 ಘಟಕಗಳಲ್ಲಿ ಅರ್ಧದಷ್ಟು – ಕಾನ್ಪುರ, ಬೆಂಗಳೂರು, ಹೈದರಾಬಾದ್, ಲಕ್ನೋ, ವಿಜಯವಾಡ, ಕರೀಂನಗರ ಇತ್ಯಾದಿ – ವಿಫಲವಾಗಿದೆ ಮತ್ತು ಮುಚ್ಚಲಾಗಿದೆ. ಬೆಂಗಳೂರಿನಲ್ಲಿ, ಮಂಡೂರಿನಲ್ಲಿನ ಘಟಕವು ಭಾರಿ ಪರಿಸರ ನಾಶವನ್ನು ಮತ್ತು ಸುತ್ತಮುತ್ತಲಿನ ನಾಗರಿಕರಿಗೆ ತೀವ್ರ ಆರೋಗ್ಯದ ಅಪಾಯಗಳನ್ನು ಸೃಷ್ಟಿಸಿದ್ದರಿಂದ ಅದನ್ನು ಮುಚ್ಚಬೇಕಾಯಿತು.”
ದೇಶದ ಬೇರೆ ಏಳು ಡಬ್ಲ್ಯುಟಿಈ ಘಟಕಗಳು ಪರಿಸರ ನಿಯಮಗಳನ್ನು ಉಲ್ಲಂಘಿಸುತ್ತಿವೆ ಎಂದು ಸ್ವಾತಿ ಹೇಳುತ್ತಾರೆ. “ಡಬ್ಲ್ಯುಟಿಈ ಘಟಕಗಳ ವಿರುದ್ಧ ನಾಗರಿಕರ ಆಂದೋಲನಗಳು ಹೆಚ್ಚುತ್ತಿವೆ. ಉದಾಹರಣೆಗೆ, ಪರಿಸರವನ್ನು ಕಲುಷಿತಗೊಳಿಸಿದ್ದಕ್ಕಾಗಿ ಓಖ್ಲಾ ಡಬ್ಲ್ಯುಟಿಈ ಘಟಕದ ವಿರುದ್ಧ ನಿರಂತರ ಪ್ರತಿಭಟನೆಗಳು ನಡೆದಿವೆ. 2016 ರಲ್ಲಿ ರಾಷ್ಟ್ರೀಯ ಹಸಿರು ನ್ಯಾಯಮಂಡಳಿ (ಎನ್‌ಜಿಟಿ) ಈ ಘಟಕಕ್ಕೆ ಪರಿಸರ ಪರಿಹಾರ ದಂಡವಾಗಿ 25 ಲಕ್ಷ ರೂ ವಿಧಿಸಿತು.”
While many youth activists across the world give their voices at @COP25CL, we are proud of young #ClimateStrikers @AseesAsheer @Amansha24 along with many others who stayed bk to fight against this pollution monster called ‘waste to energy’;after all everyone has a right to life! pic.twitter.com/yt0OMl79Pn
— Fridays For Future India (@fridays_india) December 11, 2019
ಈ ಸ್ಥಾವರಗಳು ಹಣಕಾಸು ಸಂಸ್ಥೆಗಳಿಂದ ಹಣವನ್ನು ಸಂಗ್ರಹಿಸಿ, ಅಸಮರ್ಥತೆಯ ಸೋಗಿನೊಂದಿಗೆ ದಿವಾಳಿತನವನ್ನು ಘೋಷಿಸಿ, ಹಲವಾರು ನೂರು ಕೋಟಿಗಳನ್ನು ಕಳೆದುಕೊಂಡು ಮಂಗಮಾಯವಾಗಿಬಿಡುವ ಸಾಧ್ಯತೆ ಇದೆ. ಈ ಘಟಕಗಳನ್ನು ಸ್ಥಾಪಿಸಿದ ಪ್ರದೇಶಗಳು ಅತಿ ದರಿದ್ರ ತಿಪ್ಪೆ ಗುಂಡಿಗಳಾಗಿ ಮಾರ್ಪಾಡಾಗಿವೆ.
ಉತ್ಪ್ರೇಕ್ಷೆ ಅನಿಸುತ್ತಿದೆಯೇ? ಖಂಡಿತ ಅಲ್ಲ. ನೀವು ಬೆಂಗಳೂರಿನ ಹೊರವಲಯದಲ್ಲಿರುವ ಮಂಡೂರನ್ನು ನೋಡಬೇಕು ಅಷ್ಟೇ. ಇಂದು ಮಂಡೂರಿನಲ್ಲಿ ತುಂಬಿರುವ ನೊಣಗಳು, ನಾಯಿಗಳು ಮತ್ತು ಕೊಳೆ ನೀರು ಸಂಗ್ರಹಿತ ಕೊಳಗಳು ಅಂತರ್ಜಲವನ್ನು ಕಲುಷಿತಗೊಳಿಸಿ, ಹತ್ತಿರದ ನಿವಾಸಿಗಳಿಗೆ ತೀವ್ರ ಆರೋಗ್ಯದ ಸಮಸ್ಯೆಯನ್ನುಂಟುಮಾಡುತ್ತಿವೆ.
-
ಡಬ್ಲ್ಯುಟಿಈ ಘಟಕಗಳು ವಿಂಗಡನೆಯನ್ನು ಕೊಲ್ಲುತ್ತವೆ
ಅಮಾಯಕರನ್ನು ದಾರಿ ತಪ್ಪಿಸಲು ಮುಂದೊಡ್ಡುವ ತೋರಿಕೆಯ ವಾದವೆಂದರೆ, ಬೆಂಗಳೂರು ದೊಡ್ಡ ನಗರವಾಗಿರುವುದರಿಂದ, ತ್ಯಾಜ್ಯವನ್ನು ನಿಭಾಯಿಸಲು ನಮಗೆ ಅನೇಕ ವಿಧಾನಗಳು ಬೇಕಾಗುತ್ತವೆ ಎಂಬುದು. ನಮ್ಮ ನಗರದಲ್ಲಿ ಮಿಶ್ರ ಕಸ ಎಸೆಯುವ ಸಾಕಷ್ಟು ಕಪ್ಪು ಚುಕ್ಕೆ ಜಾಗಗಳಿವೆ. ಈ ಕಪ್ಪು ಚುಕ್ಕೆಗಳಿಂದ ತ್ಯಾಜ್ಯವನ್ನು ಸಂಸ್ಕರಿಸುವ ಏಕೈಕ ಉದ್ದೇಶದಿಂದ ಡಬ್ಲ್ಯುಟಿಈ ಘಟಕಗಳನ್ನು ಸ್ಥಾಪಿಸಲಾಗುತ್ತಿದೆ ಎಂಬುದು ಈ ವಾದ.
ಕಪ್ಪು ಚುಕ್ಕೆಗಳನ್ನು ನಿರ್ವಹಿಸಲು ಡಬ್ಲ್ಯುಟಿಈಗಳನ್ನು ಸ್ಥಾಪಿಸುವುದು, ತಪ್ಪು ಮತ್ತು ದಾರಿಗೆಟ್ಟ ನಡವಳಿಕೆಯನ್ನು ಕಾನೂನುಬದ್ಧಗೊಳಿಸಿದಂತಾಗುತ್ತದೆ. ಹೆಚ್ಚಿನ ಡಬ್ಲ್ಯುಟಿಈ ಒಪ್ಪಂದಗಳು ಬಿಬಿಎಂಪಿ ಪೂರೈಸಬೇಕಾದ ಕನಿಷ್ಠ ಪ್ರಮಾಣದ ತ್ಯಾಜ್ಯವನ್ನು ಖಾತರಿಪಡಿಸುತ್ತದೆ ಮತ್ತು ಅದು ಮಾಡದಿದ್ದರೆ ಭಾರಿ ದಂಡ ವಿಧಿಸುತ್ತದೆ. ಹಾಗಾದರೆ ಬಿಬಿಎಂಪಿ ತನಗೆ ನಿರಂತರವಾಗಿ ಮಿಶ್ರ ತ್ಯಾಜ್ಯದ ಸರಬರಾಜು ಇರಲಿ ಎಂದು ಕಪ್ಪು ಚುಕ್ಕೆ ಜಾಗಗಳಲ್ಲಿ ಮಿಶ್ರ ತ್ಯಾಜ್ಯವನ್ನು ಎಸೆಯುವುದನ್ನು ಉತ್ತೇಜಿಸುತ್ತದೆಯೇ?
ಬಿಬಿಎಂಪಿ ಮಾಡಬೇಕಾದ ಕೆಲಸಗಳು ಕಠಿಣ ಪರಿವೀಕ್ಷಣೆ ಮತ್ತು ಕಪ್ಪು ಚುಕ್ಕೆ ಜಾಗಗಳು ತಲೆ ಎತ್ತದಂತೆ ತಡೆಹಿಡಿಯುವ ಜುಲ್ಮಾನೆಗಳನ್ನು, ದಂಡಗಳನ್ನು ವಿಧಿಸುವುದು. ಅಲ್ಲದೆ, ಸುಡಬಹುದಾದ, ಕೊಳೆಯದಿರುವ, ಮರುಬಳಕೆ ಮಾಡಲಾಗದ ಅಂಶವು ಶೇಕಡಾ 10 ಕ್ಕಿಂತ ಕಡಿಮೆ ಇರುವುದರಿಂದ, ಬಿಬಿಎಂಪಿ ಕಸವಿಂಗಡನೆ ತ್ಯಜಿಸದೇ ಬೇರೆ ದಾರಿ ಇಲ್ಲದಾಗಿ, ಒಪ್ಪಂದದ ಕಡ್ಡಾಯ ಪ್ರಮಾಣಗಳನ್ನು ಪೂರೈಸಲು ಮಿಶ್ರ ತ್ಯಾಜ್ಯದ ಲಭ್ಯತೆಯನ್ನು ಖಚಿತಪಡಿಸುತ್ತದೆ.
ಬಿಬಿಎಂಪಿ ಸ್ವೀಕರಿಸಬೇಕಾದ ಮುಂದಿನ ಮಾರ್ಗ
ಸುಟ್ಟ ಮಿಶ್ರ ತ್ಯಾಜ್ಯಕ್ಕಾಗಿ ಹೆಚ್ಚು ಕೇಂದ್ರೀಕೃತ ಘಟಕಗಳನ್ನು ಸ್ಥಾಪಿಸುವುದು,
- ಮಿಶ್ರತೆಯನ್ನು ಪುರಸ್ಕರಿಸುವುದು
- ತೇವದ ತ್ಯಾಜ್ಯವನ್ನು ಕಾಂಪೋಸ್ಟ್ ಗೊಳಿಸಬೇಕು ಮತ್ತು ಪ್ಲಾಸ್ಟಿಕ್ ಮರುಬಳಿಸಬೇಕು ಎನ್ನುವ ಎಸ್.ಡಬ್ಲ್ಯು.ಎಂ 2016 ರ ಮೂಲ ತತ್ತ್ವಗಳ ವಿರುದ್ಧವಿದೆ
- ಕಸ ಆಯುವವರು – ಮರುಬಳಕೆ ವಸ್ತುಗಳಿಂದಲೇ ಉಳಿದಿರುವ ಅನೌಪಚಾರಿಕ ವಲಯ – ಅನಗತ್ಯ ಎನ್ನುವಂತೆ ಮಾಡುವುದು
ಬಿಬಿಎಂಪಿ ಡಬ್ಲ್ಯುಟಿಈಗಳನ್ನು ಕಸದ ಪಿಡುಗಿಗೆ ರಾಮಬಾಣವೇನೋ ಎಂಬಂತೆ ಒತ್ತು ಕೊಡುವುದರ ಬದಲು, ತೇವದ ಕಸವನ್ನು ವಿಕೇಂದ್ರಿತವಾಗಿ ನಿರ್ವಹಿಸುದರ ಬಗ್ಗೆ ಹೈಕೋರ್ಟ್ ಆಜ್ಞೆಯ ಮೇರೆಗೆ ಗಮನ ಕೊಡಬೇಕು. ಬೆಂಗಳೂರಿನಲ್ಲಿ ಪ್ರತಿದಿನ ಉತ್ಪತ್ತಿಯಾಗುವ 5000 ಟನ್ ಕಸದಲ್ಲಿ, ಸುಮಾರು 60 ಪ್ರತಿಶತ ತೇವದ ಕಾಸವಾಗಿದ್ದು, ಅದನ್ನು ಕಾಂಪೋಸ್ಟ್ ಮಾಡಬಹುದು ಅಥವಾ ಬಯೋ-ಮೀಥೇನೇಷನ್ (ಅಂದರೆ ಬಯೋಗ್ಯಾಸ್ ಘಟಕಗಳು) ನ ಮೂಲಕ ವಿದ್ಯುತ್ತಿಗೆ ಪರಿವರ್ತಿಸಬಹುದು. ತಮ್ಮ ಹಿತ್ತಲಲ್ಲೇ ಪರಿಷ್ಕರಣೆ ನಡೆದಾಗ, ಜನ ಕಸ ವಿಂಗಡನೆಯ ಅವಶ್ಯಕತೆಯನ್ನು ಅರಿತು ಹೆಚ್ಚು ಜವಾಬ್ದಾರರಾಗುತ್ತಾರೆ.
ಮಾಲಿನ್ಯ ನಿಯಂತ್ರಣ ಮಂಡಳಿಯು ಘನ ತ್ಯಾಜ್ಯ ನಿರ್ವಹಣಾ ಘಟಕಗಳಿಗೆ ಬಫರ್ ವಲಯಗಳನ್ನು ಪ್ರಗತಿಪರವಾಗಿ ವ್ಯಾಖ್ಯಾನಿಸಬೇಕು – ಅಂದರೆ, ಘಟಕದ ಸಾಮರ್ಥ್ಯ ಹೆಚ್ಚಿದ್ದಷ್ಟೂ, ಬಫರ್ ವಲಯ ದೊಡ್ಡದಾಗಿರಬೇಕು. ಸದ್ಯಕ್ಕೆ, ಘಟಕದ ಸಾಮರ್ಥ್ಯ ಏನೇ ಇರಲಿ, ಬಫರ್ ವಲಯದ ನಿಯಮ ಕೇವಲ 500 ಮೀ ಆಗಿದ್ದು, ಅದನ್ನು 200 ಮೀ.ಗೂ ಇಳಿಸಬಹುದಾಗಿದೆ.
500 ಟನ್ ನಂತಹ ಘಟಕಕ್ಕೆ, ಇಷ್ಟು ಸಣ್ಣ ಬಫರ್ ವಲಯವು ಖಂಡಿತ ಸಾಕಾಗುವುದಿಲ್ಲ; ಇದು ಹತ್ತಿರದ ವಸತಿ ಪ್ರದೇಶಗಳ ಮಾಲಿನ್ಯಕ್ಕೆ ಕಾರಣವಾಗುತ್ತದೆ. ಆದ್ದರಿಂದ ಅಂತಹ ಘಟಕಕ್ಕೆ ಸೂಕ್ತವಾಗಿ 2-3 ಕಿಲೋಮೀಟರ್ ಬಫರ್ ವಲಯ ಅವಶ್ಯಕವಿದ್ದು, ಅದೇ 15-ಟನ್ ಘಟಕಕ್ಕೆ ಕೇವಲ 30 ಮೀಟರ್ ಬಫರ್ ವಲಯ ಸಾಕಾಗಬಹುದು.
ಬಫರ್ ವಲಯಗಳ ಇಂತಹ ವ್ಯತ್ಯಯ ವಸತಿ ಪ್ರದೇಶಗಳ ಮಾಲಿನ್ಯವನ್ನು ತಡೆಯುವುದಲ್ಲದೆ, ಜಾಗದ ಅಭಾವವಿರುವ ಬೆಂಗಳೂರಿನಲ್ಲಿ ಸಣ್ಣ, ವಿಕೇಂದ್ರೀಕೃತ ಘಟಕಗಳನ್ನು ಸ್ಥಾಪಿಸಲು ದಾರಿಮಾಡಿಕೊಡುತ್ತೆ.
ಅರ್ಥ ವ್ಯವಸ್ಥೆ ಕೂಡ ಕೇಂದ್ರೀಕೃತ ಡಬ್ಲ್ಯುಟಿಈ ಸ್ಥಾವರಗಳನ್ನು ಸಮರ್ಥಿಸುವುದಿಲ್ಲ. ಡಬ್ಲ್ಯುಟಿಈ ಸ್ಥಾವರಗಳ ಅಂದಾಜು ಬಜೆಟ್ ಅಷ್ಟೇ ಪ್ರಮಾಣದ ವಿದ್ಯುತ್ ಉತ್ಪಾದಿಸುವ ಬಯೋ-ಮೀಥೇನೇಷನ್ ಸ್ಥಾವರಕ್ಕಿಂತ ಮೂರರಿಂದ ಆರು ಪಟ್ಟು ಹೆಚ್ಚು.
ತೇವದ ತ್ಯಾಜ್ಯವನ್ನು ವಿಕೇಂದ್ರೀಕೃತ ಶೈಲಿಯಲ್ಲಿ ನಿರ್ವಹಿಸಿದರೆ, ಬೆಂಗಳೂರಿನ 198 ವಾರ್ಡ್ ಒಂದೊಂದರಲ್ಲಿ ಸುಮಾರು 15 ಟಿಪಿಡಿ (ದಿನಕ್ಕೆ ಟನ್) ಸಾಮರ್ಥ್ಯದ ಒಂದು ಸಣ್ಣ ಬಯೋ-ಮೀಥೇನೇಷನ್ ಸ್ಥಾವರವನ್ನು ಹೊಂದಿಸಿದರೆ, ಅಗತ್ಯವಿರುವ ಒಟ್ಟು ಹೂಡಿಕೆ ಕೇವಲ 600 ಕೋಟಿ ರೂ. ಇದರ ಬದಲು, ಐದು ಪ್ರಸ್ತಾವಿತ ಡಬ್ಲ್ಯುಟಿಈ ಘಟಕಗಳನ್ನು ಸ್ಥಾಪಿಸಲು 1500 ಕೋಟಿ ರೂ. ಅಗತ್ಯವಿದ್ದು, ಅದು ಮೇಲೆ ಹೇಳಿದಂತೆ ಅಪ್ರಾಯೋಗಿಕ ಕೂಡ!
ಗಮನಿಸಿ: ನಿರುಪಮಾ ಪಿಳ್ಳೈ ಕೂಡ ಈ ಲೇಖನಕ್ಕೆ ಕೊಡುಗೆ ನೀಡಿದ್ದಾರೆ.
Read the original in English here.
About our volunteer translator
Madhusudhan Rao is a long-time resident of South Bengaluru. He works in the IT sector, but dabbles in other passions from time to time, mainly centred around volunteering, teaching and language.